ಹೋರಾಟ ಸಮಿತಿ ರಚನೆ
ವಿಟ್ಲ: ೪೦೦ಕೆವಿ ಉಡುಪಿ – ಕಾಸರಗೋಡು ವಿದ್ಯುತ್ ಪ್ರಸರ ಮಾರ್ಗದಿಂದ ಸಮಸ್ಯೆಗೊಳಗಾಗುವ ಸಂತ್ರಸ್ತ ರೈತರ ಸಭೆ ಭಾನುವಾರ ವಿಟ್ಲದಲ್ಲಿ ನಡೆದು, ಹೋರಾಟ ಸಮಿತಿಯನ್ನು ರಚಿಸಲಾಯಿತು.
ಯಾವುದೇ ಮಾಹಿತಿಯನ್ನು ನೀಡದೆ ಗುಪ್ತವಾಗಿ ಸರ್ವೇ ಕಾರ್ಯ ನಡೆಸುತ್ತಿರುವ ಕಾರ್ಯವನ್ನು ರೈತರು ತೀವ್ರವಾಗಿ ಖಂಡಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಯೋಜನೆ ಆರಂಭದ ಬಗ್ಗೆ ಜೂನ್.೨ರಂದು ಸಭೆಯನ್ನು ನಡೆಸಲಾಗಿದ್ದರೂ, ಸಮಸ್ಯೆಗೊಳಗಾಗುವ ರೈತರಿಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ. ಕಂಪನಿಯ ಪರವಾಗಿ ಜಿಲ್ಲಾಧಿಕಾರಿ ನಿಲ್ಲದೆ ರೈತರ ಪರವಾಗಿ ನಿಂತು ಸಮರ್ಪಕ ಮಾಹಿತಿಯನ್ನು ಭಹಿರಂಗ ಪಡಿಸಬೇಕು ಎಂದು ರೈತರು ಆಗ್ರಹಿಸಿದರು.
ವಿದ್ಯುತ್ ಮಾರ್ಗ ಸಂಚರಿಸುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ, ಸ್ಥಳದಲ್ಲಿಯೇ ಯೋಜನೆ ಸಮಗ್ರ ಮಾಹಿತಿಯನ್ನು ಎಲ್ಲಾ ರೈತರಿಗೆ ನೀಡಬೇಕು. ವಿದ್ಯುತ್ ಮಾರ್ಗದ ಬಗ್ಗೆ ಮಾಹಿತಿ ನೀಡದೆ ಸ್ಥಳದ ಮಾಲೀಕನಿಗೆ ನೋಟೀಸ್ ಮಾಡದೆ ಸರ್ವೇ ಕಾರ್ಯಕ್ಕೆ ಆಗಮಿಸಿದರೆ ಪ್ರತಿಭಟನೆ ನಡೆಸಲು ಅಕ್ಕಪಕ್ಕದ ರೈತರ ಸಹಾಯ ಪಡೆದುಕೊಳ್ಳುವ ತೀರ್ಮಾನಕೈಗೊಳ್ಳಲಾಯಿತು. ವಿದ್ಯುತ್ ಮಾರ್ಗದ ಯೋಜನೆಯನ್ನು ಕೈಬಿಡುವ ನಿಟ್ಟಿನಲ್ಲಿ ರೈತಪರ ಸಂಘಟನೆಗಳ ಜತೆಗೆ ಹೋರಾಟದ ರೂಪುರೇಷೆ ಸಿದ್ಧ ಪಡಿಸುವ ಅನಿವಾರ್ಯವಿದೆ ಎಂದು ಸಂತ್ರಸ್ತ ರೈತರು ಹೇಳಿದರು.
ಹೋರಾಟ ಸಮಿತಿಯ ಅಧ್ಯಕ್ಷರಾಗಿ ರಾಜೀವ ಗೌಡ ಕೋಚೋಡಿ, ಉಪಾಧ್ಯಕ್ಷರಾಗಿ ವಿಷ್ಣು ಭಟ್ ಆಲಂಗಾರು, ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ಎಂ., ರೋಹಿತಾಕ್ಷ ಬಂಗ ವೀರಕಂಭ, ಜತೆ ಕಾರ್ಯದರ್ಶಿ ಕೃಷ್ಣ ಪ್ರಸಾದ್ ವಿ. ಅವರನ್ನು ಆಯ್ಕೆ ಮಾಡಲಾಯಿತು. ವಿಟ್ಲಕಸಬಾ, ವಿಟ್ಲ ಪಡ್ನೂರು, ವೀರಕಂಬ ಗ್ರಾಮದ ಸಂತ್ರಸ್ತ ಜನರು ಸೇರಿದ್ದರು.
ಜೋಸ್ವಾನ್ ಮಸ್ಕರೇಂಞಿಸ್ ಕಲ್ಲಕಟ್ಟ, ಅನಿಲ್ ಮೆಲ್ವಿನ್ ರೇಗೋ, ರವಿಪ್ರಸಾದ್ ವನಭೋಜನ, ಕೇಶವ ನೆಕ್ಕಿಲಾರು, ಶ್ಯಾಮ ಪ್ರಸಾದ್ ವನಭೋಜನ, ಶಶಿಕುಮಾರ್ ಕೋಚೋಡಿ, ಚಂದ್ರಹಾಸ ದೇವಸ್ಯ ಮತ್ತಿತರರು ಉಪಸ್ಥಿತರಿದ್ದರು.