ಬಂಟ್ವಾಳ: ಗಾಂಜಾವನ್ನು ದಾಸ್ತಾನಿರಿಸಿ, ವಿತರಣೆ ಮಾಡುತ್ತಿದ್ದ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಬಂಟ್ವಾಳ ಪೊಲೀಸರು, ಸಜಿಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ದಾಳಿ ಮಾಡಿ, ಆರೋಪಿ ಇಕ್ಬಾಲ್ ಯಾನೆ ಕಡ್ಲೆ ಇಕ್ಬಾಲ್ ಎಂಬಾತನನ್ನು ಬಂಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ತಾಲೂಕಿನಾದ್ಯಂತ ಅಕ್ರಮವಾಗಿ ಗಾಂಜಾ ಶೇಖರಿಸಿ ವಿತರಣೆ ಮಾಡುತ್ತಿದ್ದ ಮತ್ತು ಈ ಹಿಂದೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ನಿಗಾ ಇಡಲು ದ.ಕ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಬಂಟ್ವಾಳ ಉಪಾಧೀಕ್ಷಕ ವೆಲಂಟೈನ್ ಡಿಸೋಜ ನಿರ್ದೇಶನದಂತೆ ಬಂಟ್ವಾಳ ತಾಲೂಕಿನಲ್ಲಿ ಅಕ್ರಮ ಗಾಂಜಾ ಪತ್ತೆ ಹಚ್ಚಲು ತಂಡವನ್ನು ರಚಿಸಿದ್ದು ಅದರಂತೆ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕರಾದ ಟಿ.ಡಿ ನಾಗರಾಜ್ ನೇತೃತ್ವದ ತಂಡ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಸುಮಾರು 30 ಸಾವಿರ ರೂ ಮೌಲ್ಯದ 1 ಕೆ.ಜಿ 150 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಕ್ಬಾಲ್ ನನ್ನು ದಸ್ತಗಿರಿ ಮಾಡಲಾಗಿರುತ್ತದೆ. ಪ್ರಕರಣದ ಸಹ ಆರೋಪಿಗಳಾದ ಸಜೀಪನಡುವಿನ ಎಸ್.ಕೆ ರಫೀಕ್ ಮತ್ತು ಕಂಚಿನಡ್ಕ ಪದವಿನ ಮೋನು ಯಾನೆ ಪಿಲಿ ಮೋನು ತಲೆಮರೆಸಿಕೊಂಡಿರುತ್ತಾರೆ. ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ. ಎಂ.ಎಸ್, ವಿಶೇಷ ತಂಡದ ಸದಸ್ಯರಾದ ಉದಯ ರವಿ, ಜನಾರ್ಧನ, ಸುರೇಶ್, ಪ್ರವೀಣ್, ಗೋಣಿಬಸಪ್ಪ, ಇರ್ಷಾದ್, ವಿವೇಕ್, ಕುಮಾರ್ ರವರ ತಂಡ ದಾಳಿಯಲ್ಲಿ ಪಾಲ್ಗೊಂಡಿದ್ದರು.