ಜಿಲ್ಲಾ ಸುದ್ದಿ

ಎಂಡೋಸಲ್ಫಾನ್ ಸಂತ್ರಸ್ತರಿಗೆ ಪಿಂಚಣಿ ಸಲ್ಲಿಕೆಯಾಗುತ್ತಿರುವ ಬಗ್ಗೆ ಖಾತ್ರಿ ಪಡಿಸಲು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಸೂಚನೆ

ಎಂಡೋಸಲ್ಫಾನ್ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಪಿಂಚಣಿ ಪ್ರತಿಯೊಬ್ಬರಿಗೂ ತಲುಪುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು, ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.

ಜುಲೈ 15ರಂದು ಗುರುವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕಾರ್ಯಕ್ರಮ ಕುರಿತಂತೆ ಹಮ್ಮಿಕೊಳ್ಳಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂಡೋಸಲ್ಫಾನ್ ಕೀಟನಾಶಕ ಸಿಂಪಡಣೆಯಿಂದ ಸಂತ್ರಸ್ತರಾದವರಿಗೆ ಸರ್ಕಾರ ಪ್ರತಿ ಮಾಹೆ ಪಿಂಚಣಿ ನೀಡುತ್ತಿದೆ, ಅಲ್ಲದೇ ಅವರನ್ನು ವಿಶೇಷ ವರ್ಗಕ್ಕೆ ಸೇರಿಸಿ ಬಿಪಿಎಲ್ ಪಡಿತರ ಚೀಟಿಯನ್ನು ಸಹ ನೀಡಿದೆ, ಖಜಾನೆ-೨ರಲ್ಲಿ ಈ ಸಂತ್ರಸ್ತರ ಪಿಂಚಣಿ ಬಿಲ್ಲನ್ನು ನಿರ್ವಹಿಸಲಾಗುತ್ತಿದೆ, ಈ ಮಾಹಿತಿ ಪಡೆದುಕೊಂಡು ಸಂತ್ರಸ್ತರಿಗೆ ಪ್ರತಿ ಮಾಹೆ ಪಿಂಚಣಿ ಪಾವತಿಯಾಗುತ್ತಿರುವ ಬಗ್ಗೆ ಕಾಲ್ ಸೆಂಟರ್‌ಗಳ ಮೂಲಕ ದೂರವಾಣಿಯಲ್ಲಿ ಸಂಪರ್ಕಿಸಿ ಅವರಿಗೆ ಪಿಂಚಣಿ ಪಾವತಿಯಾಗುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು,ಒಂದು ವೇಳೆ ಸಕಾಲದಲ್ಲಿ ಈ ಸಂತ್ರಸ್ತರಿಗೆ ಪಿಂಚಣಿ ಬಾರದಿದ್ದಲ್ಲೀ ಕಾರಣಗಳನ್ನು ಪರಿಶೀಲಿಸಿ, ಸಂಬಂಧಿಸಿದವರಿಗೆ ಮಾಹಿತಿ ರವಾನಿಸಬೇಕು, ಒಟ್ಟಿನಲ್ಲಿ ಸರ್ಕಾರದಿಂದ ನೀಡಲಾಗುತ್ತಿರುವ ಪಿಂಚಣಿ ಎಲ್ಲಾ ಸಂತ್ರಸ್ತರಿಗೂ ಸಕಾಲದಲ್ಲಿ ತಲುಪಬೇಕು, ತಲುಪಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ದೃಢೀಕರಿಸಬೇಕು ಎಂದು ಅವರು ಸೂಚಿಸಿದರು.  
ಅದೇ ರೀತಿ ಎಂಡೋಸಲ್ಫಾನ್ ಸಂತ್ರಸ್ತರನ್ನು ಗುರುತಿಸಲು ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ಮೆಡಿಕಲ್ ಕಾಲೇಜು ಹಾಗೂ ಇತರೆಡೆ ಮತ್ತಷ್ಟು ಶಿಬಿರಗಳನ್ನು ಆಯೋಜಿಸಬೇಕು, ಇದಕ್ಕೂ ಮುನ್ನ ಈ ಬಗ್ಗೆ ವ್ಯಾಪಕ ಪ್ರಚಾರ ನೀಡಬೇಕು, ಈ ಶಿಬಿರದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಗುರುತಿಸುವಿಕೆ ಹಾಗೂ ಪರೀಕ್ಷೆ ಒಟ್ಟಿಗೆ ನಡೆಯಬೇಕು, ಆದಕಾರಣ ಐಸಿಸಿ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ, ಎಲ್ಲಾ ತಾಲೂಕು ಪಂಚಾಯಿತಿ ವ್ಯಾಪ್ತಿಯ ಕಾರ್ಯನಿರ್ವಹಣಾಧಿಕಾರಿಗಳು ಶಿಬಿರಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು, ಎಂಡೋಸಲ್ಫಾನ್ ಸಂತ್ರಸ್ತ ವ್ಯಕ್ತಿಗೆ ಕೋವಿಡ್ ವ್ಯಾಕ್ಸಿನ್ ಹಾಕಿಸಬೇಕು, ಒಂದು ವೇಳೆ ಅವರು ಹಾಸಿಗೆಯಿಂದ ಎದ್ದು ಬರಲು ಸಾಧ್ಯವಿಲ್ಲದಿದ್ದರೆ ಮನೆಗೆ ಹೋಗಿ ವ್ಯಾಕ್ಸಿನ್ ಹಾಕಿಸುವಂತೆ ತಿಳಿಸಿದರು. 

ವಿಕಲಚೇತನರಿಗೆ ಆದ್ಯತೆಯ ಮೇರೆಗೆ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತಿದೆ, ಅದೇರೀತಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಆದ್ಯತೆಯ ಮೇರೆಗೆ ನೀಡಬೇಕು, ಪಾಲನಾ ಕೇಂದ್ರ ಪುನರ್ ರಚನೆಗೆ ಟೆಂಡರ್ ಕರೆಯಬೇಕು ಎಂದು ಜಿಲ್ಲಾಧಿಕಾರಿಯವರು ಹೇಳಿದರು.  

ಸಂತ್ರಸ್ತರ ನೋಡಲ್ ಅಧಿಕಾರಿ ಡಾ. ನವೀನ್ ಚಂದ್ರ ಮಾತನಾಡಿ, ಎಂಡೋಸಲ್ಫಾನ್ ಸಂತ್ರಸ್ತರಿಗೆ ಅವರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ವಿಕಲಚೇತನರ ಇಲಾಖೆಯಿಂದ ನೀಡಲಾಗುವುದು, ಅಗತ್ಯವಿರುವ ಅಗತ್ಯವಿರುವ ವಾಟರ್ ಬೆಡ್, ವೀಲ್ ಚೇರ್ ಸೇರಿದಂತೆ ಇತ್ಯಾದಿ ಪರಿಕರಗಳ ವಿತರಣೆಗೆ ಕ್ರಮವಹಿಸಲಾಗುತ್ತಿದೆ ಎಂದರು. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ದಿನೇಶ್ ಕುಮಾರ್, ವಿಭಾಗಾಧಿಕಾರಿ ಮದನ್ ಮೋಹನ್, ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಡಿಯುಡಿಸಿಯ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿದ್ದರು. ಜಿಲ್ಲೆಯ ತಾಲೂಕು ಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ