ಬಂಟ್ವಾಳ: ಬಂಟ್ವಾಳ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕಾಲೇಜಿನ 387 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮ ಹಾಗೂ ಲಸಿಕಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಜನರ ಜೀವನ ಹಾಗೂ ಜೀವನಕೋಸ್ಕರ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಲಸಿಕಾ ಕಾರ್ಯ ನಡೆಸುತ್ತಿದ್ದು, ಸರ್ಕಾರದ ಈ ವ್ಯವಸ್ಥೆಯ ಸದುಪಯೋಗಪಡೆಯಬೇಕು ಎಂದು ಕರೆ ನೀಡಿದರು.
ಪ್ರಿನ್ಸಿಪಾಲ್ ಭರತ್ ಜೆ. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಈ ಟ್ಯಾಬ್ ನಲ್ಲಿ ಅಡಕವಾಗಿರುವ ನುರಿತ ಶಿಕ್ಷಕರ ತರಬೇತಿಯನ್ನು ಪಡೆಯಬೇಕು, ಇಂಟರ್ನೆಟ್ ಅನ್ನೂ ಉಚಿತವಾಗಿ ನೀಡಲಾಗಿದೆ ಎಂದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶ್ವಿನಿ, ಕಾಲೇಜು ಅಧೀಕ್ಷಕಿ ಒಪಿಲಿಯಾ ಡಿಸೋಜ, ಮೆಕ್ಯಾನಿಕಲ್ ವಿಭಾಗದ ವಿಭಾಗಾಧಿಕಾರಿ ಡಾ.ದೇವರಾಜ್ ನಾಯ್ಕ್ ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಭಾಸ್ಕರ್ ಸ್ವಾಗತಿಸಿದರು. ಚಿತ್ರಕುಮಾರ್ ವಂದಿಸಿದರು. ನವೀನ್ ಜಿ.ಸಿ. ಕಾರ್ಯಕ್ರಮ ನಿರ್ವಹಿಸಿದರು.