ಬಂಟ್ವಾಳ: ಕೇಂದ್ರ ಸರಕಾರವು ಸುಗ್ರಿವಾಜ್ನೆಗಳ ಮೂಲಕ ಕೃಷಿ ಕ್ಷೇತ್ರದ ಹೆಸರಿನಲ್ಲಿ ತಂದಿರುವ ಮೂರು ಕಾಯ್ದೆಗಳ ವಿರುದ್ಧ ರಾಷ್ಟ್ರದ್ಯಾಂತ ನಡೆಯುತ್ತಿರುವ ಹೋರಾಟಕ್ಕೆ ಜೂನ್ 26ಕ್ಕೆ ಏಳು ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಸಂಯುಕ್ತ ಕಿಸಾನ್ ಮೋರ್ಚಾದಿಂದ ನಡೆಯುವ ಪ್ರತಿಭಟನೆ ಭಾಗವಾಗಿ ಸೋಮವಾರ ಬಂಟ್ವಾಳ ಮಿನಿ ವಿಧಾನಸೌಧ ಮುಂಭಾಗ ರೈತ , ದಲಿತ, ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾದ್ಯಕ್ಷ ಒಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್ ಮಾತನಾಡಿ ರೈತರನ್ನು ಸರಕಾರ ಕಡೆಗಣಿಸುತ್ತಿದ್ದು ಇಂತಹ ಸರಕಾರ ತೊಲಗುವವರೆಗೆ ಹೋರಾಟ ತೀವ್ರಗೊಳಿಸುವುದಾಗಿ ಕರೆ ನೀಡಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ಸರಕಾರಗಳು ಜನರ ಧ್ವನಿಯನ್ನು ಹತ್ತಿಕ್ಕಲು ಲಾಕ್ ಡೌನ್ ಹೆಸರಿನಲ್ಲಿ ಜನರನ್ನು ಬೆದರಿಸುತ್ತಿದ್ದು. ಸರಕಾರದ ಈ ಕ್ರಮದ ವಿರುದ್ಧ ಜನತೆ ದೊಡ್ಡ ಮಟ್ಟದಲ್ಲಿ ಬೀದಿಗಿಳಿಯಲಿದ್ದಾರೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಬಾಳ್ತಿಲ ವಲಯ ಅಧ್ಯಕ್ಷರಾದ ಸುರೇಂದ್ರ ಕೊರ್ಯ, ಉಪಾಧ್ಯಕ್ಷ ಆಲ್ವಿನ್ ಲೋಬೋ, ಡೇನಿಯಲ್ ಎವರೆಸ್ಟ್ ಪ್ರಾಂಕ್, ಡಿವೈಎಫ್‌ಐ ಮುಖಂಡ ತುಳಸೀದಾಸ್ ವಿಟ್ಲ, ಮಹೇಶ್ ಪೂಜಾರಿ, ಲಿಯಾಕತ್ ಖಾನ್, ತಾಬೀಸ್ ವಿಟ್ಲ, ದಿನೇಶ್ ಆಚಾರಿ ಮಾಣಿ, ಸದಾನಂದ ಶೀತಲ್ ಮುಂತದವರು ನೇತೃತ್ವ ವಹಿಸಿದ್ದರು.