ವಾಮದಪದವು

ಸೀಲ್ ಡೌನ್ ವೇಳೆ ವಾಮದಪದವಿನಲ್ಲಿ ನೆರವು ನೀಡಿದ ತುಳುನಾಡ ರಕ್ಷಣಾ ವೇದಿಕೆ, 1500 ಕುಟುಂಬಗಳಿಗೆ ಕೊಡುಗೆ

  • ಗೋಪಾಲ್ ಅಂಚನ್ ಆಲದಪದವು

ಬರೆಹ: ಗೋಪಾಲ್ ಅಂಚನ್, ಆಲದಪದವು

ಪತ್ರಕರ್ತರು

ಗ್ರಾಮೀಣ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕವು ಲಾಕ್ ಡೌನ್ ಮತ್ತು ಸೀಲ್ ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬಡಜನರಿಗೆ ತರಕಾರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದೆ. ಕೊರೊನಾ ಲಾಕ್ ಡೌನ್ ಮತ್ತು ಸೀಲ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಕುಟಂಬಗಳಿಗೆ ವಾರಕ್ಕೆ ಬೇಕಾದ ವೈವಿಧ್ಯಮಯ ತರಕಾರಿಗಳನ್ನು ವಿತರಿಸಿದ ಸಂಘಟನೆಯ ಈ ಸೇವಾ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ತೀರಾ ಗ್ರಾಮೀಣ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಘಟನೆಯು ಈಗಾಗಲೇ ಚೆನ್ನೈತ್ತೋಡಿ ಮತ್ತು ಕುಕ್ಕಿಪ್ಪಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಏಳು ಕಡೆಗಳಲ್ಲಿ ಅರ್ಹರಿಗೆ ತರಕಾರಿ ವಿತರಿಸಿದ್ದು ಇನ್ನೂ ಒಂದೆರೆಡು ಕಡೆಗಳಲ್ಲಿ ವಿತರಿಸಲು ಯೋಜನೆ ರೂಪಿಸಿದೆ.

ಲಾಕ್ ಡೌನ್ ಆರಂಭದಲ್ಲೇ ತಮ್ಮ ಊರಿನ ಜನರಿಗೆ ಯಾವುದಾದರೂ ರೀತಿಯಲ್ಲಿ ನೆರವಾಗಬೇಕೆಂಬ ಉದ್ಧೇಶದಿಂದ ಎರಡು ಗ್ರಾಮ ಪಂಚಾಯತು ವ್ಯಾಪ್ತಿಯ ಆರು ಗ್ರಾಮಗಳ 1500 ಮಂದಿಗೆ ತರಕಾರಿ ವಿತರಿಸಲು ಸಂಘಟನೆಯು ಯೋಜನೆ ರೂಪಿಸಿತು. ಘಟಕದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉಳಗುಡ್ಡೆ ಮತ್ತು ಸದಸ್ಯರನ್ನೊಳಗೊಂಡ ತಂಡ ನಿಗದಿಪಡಿಸಿದ ದಿನಾಂಕ ಆಯಾಯ ಊರಿಗೆ ತೆರಳಿ ತರಕಾರಿ ವಿತರಿಸಿತು. ಇದರಂತೆ ಈಗಾಗಲೇ ಚೆನ್ನೈತ್ತೋಡಿ ಗ್ರಾಮ ಪಂಚಾಯತು ವ್ಯಾಪ್ತಿಯ ವಾಮದಪದವು, ಆಲದಪದವು, ಬಸ್ತಿಕೋಡಿ, ಪಾಲೆದಮರ, ಮಾವಿನಕಟ್ಟೆ, ಮುರದಮೇಲು ಮತ್ತು ಕುಕ್ಕಿಪ್ಪಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ಕುದ್ಕೋಳಿಯಲ್ಲಿ ತರಕಾರಿ ವಿತರಣೆಯ ಕಾರ್ಯಕ್ರಮ ನಡೆದಿದೆ. ಪ್ರತೀ ಊರಿನಲ್ಲಿಯೂ ತರಕಾರಿ ವಿತರಿಸುವಾಗ ಆಯಾ ಭಾಗದ ನೂರರಿಂದ ಇನ್ನೂರು ಜನರು ತರಕಾರಿ ಪಡೆದಿದ್ದು ಈಗಾಗಲೇ ಪ್ರಯೋಜನ ಪಡೆದವರ ಸಂಖ್ಯೆ ಸಾವಿರದ ಗಡಿ ದಾಟಿದೆ. ಇನ್ನೂ ಕೆಲವು ಕಡೆಗಳಲ್ಲಿ ತರಕಾರಿ ವಿತರಿಸಲು ಸಿದ್ಧತೆ ನಡೆಯುತ್ತಿದೆ.

ಜಾಹೀರಾತು

ವೈವಿಧ್ಯಮಯ ತರಕಾರಿಗಳು: ಬಸಲೆ, ಬೀನ್ಸ್, ಬಿಟ್ರೋಟು, ಗೆಣಸು, ಕ್ಯಾಬೇಜ್, ಬಟಾಟೆ, ಟೊಮೆಟೋ, ಶುಂಠಿ ಮೊದಲಾದ ವೈವಿಧ್ಯಮಯ ತರಕಾರಿಗಳು ಕಿಟ್ ನಲ್ಲಿರುತ್ತದೆ. ಯಾವುದಾದರೂ ತರಕಾರಿಯನ್ನು ಮನೆಮಂದಿ ತಿನ್ನದಿದ್ದಲ್ಲಿ ಅದರ ಬದಲಿಗೆ ಬೇರೆ ತರಕಾರಿಯನ್ನು ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗಿದೆ.

ಸದಸ್ಯರ ಸ್ವ ಇಚ್ಚೆಯ ಕಾರ್ಯ: ಗ್ರಾಮೀಣ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಘಟನೆಯಲ್ಲಿ ನಿತ್ಯ ದುಡಿಮೆ ಮಾಡಿ ಜೀವನ ನಡೆಸುವ ಸದಸ್ಯರೇ ಹೆಚ್ಚು. ಆದರೂ ಪ್ರತಿಯೊಬ್ಬ ಸದಸ್ಯರು ತನ್ನ ಕೈಲಾದಷ್ಟು ನೀಡಿದ ದೇಣಿಗೆಯನ್ನು ಒಟ್ಟು ಮಾಡಿ ತರಕಾರಿ ಖರೀದಿಸಿ ಬಡವರಿಗೆ ವಿತರಿಸಿದ್ದಾರೆ. ತುಳುನಾಡ ರಕ್ಷಣಾ ವೇದಿಕೆಯ ಈ ಕಾರ್ಯಕ್ಕೆ ಕೆಲವರು ತರಕಾರಿಗಳನ್ನು ಮತ್ತೆ ಕೆಲವು ದಾನಿಗಳು ಒಂದಷ್ಟು ಆರ್ಥಿಕ ನೆರವು ನೀಡಿ ಸಹಕರಿಸಿದ್ದಾರೆ.

ಒಂದೇ ಕಡೆ ವಿತರಿಸಿದರೆ ಜನಜಂಗುಳಿ ಸೇರುತ್ತದೆ, ಸುಧಾರಿಸುವುದೂ ಕಷ್ಟ. ಅದ್ದರಿಂದ ಜನರಿಗೂ ಅನುಕೂಲವಾಗಲೆಂದು ನಮ್ಮ ತಂಡ ಆಯಾ ಊರಿಗೆ ಹೋಗಿ ತರಕಾರಿ ಕಿಟ್ ವಿತರಿಸುತ್ತಿದೆ. ಈಗಾಗಲೇ ಏಳು ಕಡೆಗಳಲ್ಲಿ ವಿತರಿಸಲಾಗಿದ್ದು ಇನ್ನೂ ಎರಡು ಕಡೆಗಳಲ್ಲಿ ವಿತರಿಸುವ ಯೋಜನೆ ಇದೆ. ನಮ್ಮ ಈ ಕಾರ್ಯಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು ಎನ್ನುತ್ತಾರೆ ತುರವೇ ವಾಮದಪದವು ಘಟಕಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಉಳಗುಡ್ಡೆ

ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿˌ ಉಳಗುಡ್ಡೆ ನೇತೃತ್ವದ ತಂಡದಲ್ಲಿ ಲಾದ್ರೂ ಮೇನೆಜಸ್, ಹರೀಶ್ ಪೂಜಾರಿ, ಪ್ರದೀಪ್ ಪೂಜಾರಿ, ಸಾನ್ಟಿ ಡಿಸೋಜ, ವಾರೀಜ ಪೆಜಕ್ಕಳ, ರೀಟಾ ಮರಿಯಾ ಮೇನಜಸ್, ಪ್ರಮೀಳಾ ಪೂಜಾರಿ, ಕುಶಲ ಪೆಜಕ್ಕಳ, ಪ್ರಭಾಕರ ಪ್ರಭು, ದಿನೇಶ್ ನಾಯಕ್ ವಾಮದಪದವು, ಶುಭಲತಾ ಮಾವಿನಕಟ್ಟೆ ವನಿತಾ ಮುರದಮೇಲು, ಸುಭಾಸ್ ನಾಯ್ಕ್ˌ, ಸೌಕಾತ್ ಅಲಿ, ಪ್ರಕಾಶ್ ಪೂಜಾರಿ ಪಾಲೆದಡಿ, ಸಂಪತ್ ಪೂಜಾರಿ ಪಾಲೆದಡಿ, ಶ್ರೇಯಸ್ ನಾಯ್ಕ್, ದಯಾನಂದ ನಾಯ್ಕ್, ಸಂದೀಪ್ ಮಾಡಿವಾಳ, ಗಂಗಾಧರ ಶೆಟ್ಟಿ ಮೊದಲಾದವರು ತರಕಾರಿ ವಿತರಣೆಯ ಈ ಕಾರ್ಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಸಂಘಟನೆಯ ಈ ಕಾರ್ಯ ಮಾದರಿಯಾದುದು ಎನ್ನುತ್ತಾರೆ ಊರ ನಾಗರಿಕರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts