ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಾಣವಾಯು ಯಂತ್ರ ಆಗಮನವಾಗಿದೆ. ಹಿರಿಯ ಪತ್ರಕರ್ತ ಬೆಂಗಳೂರಿನ ಬದ್ರುದ್ದೀನ್ ಮಾಣಿ ಅವರ ಕೊಡುಗೆಯ ಯಂತ್ರವನ್ನು ವೈದ್ಯಾಧಿಕಾರಿ ಡಾ. ಶಶಿಕಲಾ ಅವರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಅವರು ವಿಧ್ಯುಕ್ತವಾಗಿ ಹಸ್ತಾಂತರಿಸಿ, ಕೊರೊನಾ ಮುನ್ನೆಚ್ಚರಿಕೆ ಮತ್ತು ನಿಯಂತ್ರಣಕ್ಕಾಗಿ ಬಡವರಿಗೆ ಅನುಕೂಲವಾಗಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಾಣವಾಯು ಯಂತ್ರ ಮತ್ತಷ್ಟು ಬಲ ನೀಡಲಿದೆ ಎಂದರು. ಪತ್ರಕರ್ತರಾಗಿ ಬೆಂಗಳೂರಿನಲ್ಲಿ ಸುದೀರ್ಘ ವರ್ಷಗಳಿಂದ ಕೆಲಸ ಮಾಡುತ್ತಿರುವ ಬದ್ರುದ್ದೀನ್ ಮಾಣಿ ಅವರು ಯಂತ್ರವನ್ನು ಒದಗಿಸುವ ಮೂಲಕ ಹುಟ್ಟೂರನ್ನು ಕೊರೊನಾ ಮುಕ್ತ ಗ್ರಾಮವನ್ನಾಗಿಸಲು ಸಹಕರಿಸುತ್ತಿದ್ದಾರೆ ಎಂದು ಹೇಳಿದ ಆಳ್ವ, ಗ್ರಾಮಸ್ಥರು, ಊರವರು ಆಡಳಿತದೊಂದಿಗೆ ಕೈಜೋಡಿಸಿದಾಗ ಮತ್ತಷ್ಟು ಪ್ರಗತಿ ಸಾಧ್ಯ ಎಂದರು.
ಕೊರೋನ ಇನ್ನಿತರ ಆರೋಗ್ಯ ಸಮಸ್ಯೆಗಳು ಇರುವಂತಹ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಾಣವಾಯು ಯಂತ್ರಗಳ ಅಗತ್ಯ ಈ ಮೊದಲೇ ಇತ್ತು ಎಂದರು. ಈ ಸಂದರ್ಭದಲ್ಲಿ ಪೆರ್ನೆ ಗ್ರಾಮ ಪಂಚಾಯತ್ ಅಧ್ಯಕ್ಷ ಸುನಿಲ್ ನೆಲ್ಸನ್ ಪಿಂಟೋ, ಮಾಣಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಇಬ್ರಾಹಿಂ.ಕೆ.ಮಾಣಿ, ಸುದೀಪ್ ಕುಮಾರ್ ಶೆಟ್ಟಿ, ಕಡಬ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಮಹಮ್ಮದ್ ರಫೀಕ್, ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಮತ್ತಿತರರು ಉಪಸ್ಥಿತರಿದ್ದರು.