ಕಳೆದ ಎರಡು ದಿನಗಳ ಹಿಂದೆ ವಿಟ್ಲ ಪ್ರವೇಶಿಸುವವರಿಗೆಲ್ಲಾ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ನಿರ್ಧರಿಸಿ ಪಟ್ಟಣ ಪಂಚಾಯಿತಿ ಗುರುವಾರ ನಡೆಸಿದ 80 ಮಂದಿಯ ಕೋವಿಡ್ ಟೆಸ್ಟ್ ನೀಡಿದವರೆಲ್ಲರಿಗೂ ನೆಗೆಟಿವ್ ವರದಿ ಬಂದಿದೆ.
ಎರಡನೇ ದಿನ ಪರೀಕ್ಷೆ ನಡೆಸಲಾದ 132 ಮಂದಿಯ ವರದಿ ಇನ್ನೂ ಬರಲು ಬಾಕಿ ಇದೆ. ಆದರೆ ವಿಟ್ಲ ಪೇಟೆಯಲ್ಲಿ ಪ್ರಕರಣಗಳ ಸಂಖ್ಯೆ ಇಳಿದಿಲ್ಲ. ಶನಿವಾರವೂ ಐವರಿಗೆ ಕೊರೊನಾ ಸೋಂಕು ತಗಲಿದೆ. ವಿಟ್ಲದಲ್ಲಿ ವ್ಯಾಪಕವಾಗಿ ಕೊರೊನಾ ಸೋಂಕು ಹರಡುತ್ತಿದ್ದು, ಅವುಗಳನ್ನು ನಿಯಂತ್ರಿಸಲು ಪೇಟೆಗೆ ಬರುವ ಪ್ರತಿಯೊಬ್ಬರನ್ನು ಪರೀಕ್ಷೆಗೊಳಪಡಿಸಬೇಕೆಂದು ಹಾಗೂ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲು ಪಟ್ಟಣ ಪಂಚಾಯಿತಿ ನಿರ್ಣಯ ಕೈಗೊಂಡಿತ್ತು. ವಿಟ್ಲ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ, ನಾಡಕಚೇರಿ, ಮೇಗಿನಪೇಟೆ ಮೂರು ಕಡೆಗಳಲ್ಲಿ ವಿಟ್ಲ ಸಮುದಾಯ ಆರೋಗ್ಯದ ಕೇಂದ್ರದ ಮತ್ತು ಅಳಿಕೆಯ ಸಿಬ್ಬಂದಿಗಳು ಕೋವಿಡ್ ಪರೀಕ್ಷೆ ನಡೆಸಿದ್ದರು. ಪ್ರಥಮ ದಿನ ಗುರುವಾರವಿಟ್ಲ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಾಸರಗೋಡು ರಸ್ತೆ ಮೂಲಕ ಪೇಟೆಗೆ ಬರುವ ಒಟ್ಟು 80 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಅವರೆಲ್ಲರ ವರದಿ ನೆಗೆಟಿವ್ ಬಂದಿದೆ.
ಗುರುವಾರ 80 ಮಂದಿಯನ್ನು ಶುಕ್ರವಾರ 132 ಮಂದಿ ಸೇರಿದಂತೆ ಒಟ್ಟು 212 ಮಂದಿಯ ಪರೀಕ್ಷೆ ನಡೆಸಲಾಗಿತ್ತು. ಇನ್ನೂ 132 ಮಂದಿಯ ಪರೀಕ್ಷೆಯ ವರದಿ ಬರಲು ಬಾಕಿಯಿದೆ. ಪ್ರಥಮ 80 ಮಂದಿಯ ವರದಿ ನೆಗೆಟಿವ್ ಬಂದಿದ್ದರಿಂದ ಜನತೆ ನಿಟ್ಟುಸಿರುವ ಬಿಟ್ಟಿದ್ದಾರೆ.