ಬಂಟ್ವಾಳ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗಿದ್ದು, ಶನಿವಾರ, ಭಾನುವಾರ ಇದು ಇನ್ನಷ್ಟು ಕಠಿಣವಾಗಿರಲಿದೆ, ಈ ಮಧ್ಯೆ ಪೇಟೆಗೆ ಬಂದ 132 ಮಂದಿಯನ್ನೂ ಕೊರೊನಾ ಪರೀಕ್ಷೆಗೊಳಪಡಿಸಲಾಗಿದೆ.
ವಿಟ್ಲ ಪಟ್ಟಣ ಪಂಚಾಯತ್ ಕೊರೊನಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ಕೊರೊನಾ ನಿಯಂತ್ರಿಸಲು ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದ್ದು, ಪ್ರತಿದಿನ ಪೇಟೆಗೆ ಬರುವ ಜನರನ್ನು ವಿಟ್ಲ ಪೇಟೆಯ ಪ್ರವೇಶ ಸ್ಥಳವಾದ ನಾಡಕಚೇರಿ, ಮೇಗಿನಪೇಟೆ, ಬೊಬ್ಬೆಕೇರಿ, ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು, ಪಟ್ಟಣ ಪಂಚಾಯತ್ ಸಿಬ್ಬಂದಿಗಳು, ವಿಟ್ಲ ಪೊಲೀಸರು ಜಂಟಿಯಾಗಿ ನಾಕಾಬಂಧಿ ಅಳವಡಿಸಿದ್ದರು. ವಿಟ್ಲ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣ, ನಾಡಕಚೇರಿ, ಮೇಗಿನಪೇಟೆ ಮೂರು ಕಡೆಗಳಲ್ಲಿ ವಿಟ್ಲ ಸಮುದಾಯ ಆರೋಗ್ಯದ ಕೇಂದ್ರದ ಮತ್ತು ಅಳಿಕೆಯ ಸಿಬ್ಬಂದಿಗಳು ಕೋವಿಡ್ ಪರೀಕ್ಷೆ ನಡೆಸಿದರು. ಗುರುವಾರ 80 ಮಂದಿಯನ್ನು ಇಂದು 132 ಮಂದಿ ಸೇರಿದಂತೆ ಒಟ್ಟು 212 ಮಂದಿಯ ಸ್ಲ್ಯಾಬ್ ಪರೀಕ್ಷೆ ನಡೆಸಲಾಗಿದೆ. ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.