ಬಂಟ್ವಾಳ: ಬಂಟ್ವಾಳ ಮೂಡುಬಿದಿರೆ ರಸ್ತೆಯ ಬಾರ್ಜಾರು ತಿರುವಿನಲ್ಲಿ ನಾಗರಿಕರ ಹಲವು ವರ್ಷಗಳ ಬೇಡಿಕೆಯಾಗಿದ್ದ ಮೋರಿ ಅಳವಡಿಕೆ ಮತ್ತು ರಸ್ತೆ ವಿಸ್ತರಣಾ ಕಾಮಗಾರಿಗೆ ಶುಕ್ರವಾರ ಚಾಲನೆ ದೊರಕಿದೆ.
ಬಾರ್ಜಾರು ತಿರುವು ಬಳಿ ಇರುವ ಹಡಿಲು ಬಿದ್ದಿರುವ ಭತ್ತದ ಗದ್ದೆಯಲ್ಲಿ ಕೃಷಿ ಮಾಡಲು ಸ್ಥಳೀಯ ರೈತರು ಈ ವರ್ಷ ಮುಂದೆ ಬಂದಿದ್ದು ಈ ಕಾಮಗಾರಿ ನಡೆದರೆ, ರೈತರಿಗೆ ಮತ್ತಷ್ಟು ಉಪಕಾರವಾಗಲಿದೆ. ಭಾರೀ ತಿರುವು ಮತ್ತು ಕಿರಿದಾದ ರಸ್ತೆಯಲ್ಲೇ ಮಳೆ ನೀರು ಹರಿದು ಹಲವು ಬಾರಿ ವಾಹನ ಅಪಘಾತಕ್ಕೂ ಕಾರಣವಾಗಿತ್ತು. ಇಲ್ಲಿನ ನಾಗರಿಕರ ಹಲವು ವರ್ಷಗಳ ಬೇಡಿಕೆಯಾಗಿದ್ದ ಮೋರಿ ಅಳವಡಿಕೆ ಮತ್ತು ರಸ್ತೆ ವಿಸ್ತರಣೆಗೊಳಿಸುವ ಕಾಮಗಾರಿ ಇದೀಗ ಆರಂಭಗೊಂಡಿದೆ. ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಸದಸ್ಯ ಸಂತೋಷ್ ಕುಮಾರ್ ಬೆಟ್ಟು, ಪಿಡಿಒ ಮಧು, ಎಂಜಿನಿಯರ್ ಅರುಣ್ ಪ್ರಕಾಶ್, ಗುತ್ತಿಗೆಗಾರ ವಳಚ್ಚಿಲ್ ಖಾದರ್ ಮತ್ತಿತರರು ಇದ್ದರು. ಈ ಹಿನ್ನೆಲೆಯಲ್ಲಿ ಜೂನ್ 19ರಂದು ಬೆಳಿಗ್ಗೆ ಗಂಟೆ 10 ರಿಂದ ಸಂಜೆ 4 ಗಂಟೆತನಕ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಮೂಡುಬಿದ್ರೆ-ಸಿದ್ಧಕಟ್ಟೆಯಿಂದ ಬರುವ ವಾಹನಗಳು ಕರ್ಪೆ ಅಣ್ಣಳಿಕೆ ಮಾಗರ್ಗವಾಗಿ ಸಂಚರಿಸಬೇಕು, ವಾಮದಪದವು ಕಡೆಯಿಂದ ಬರುವ ವಾಹನಗಳು ಕರಿಮಲೆ-ಅಣ್ಣಳಿಕೆ ಮಾರ್ಗ ಬಳಸಬಹುದು. ಬಂಟ್ವಾಳ ಕಡೆಯಿಂದ ಬರುವ ವಾಹನಗಳು ಅಣ್ಣಳಿಕೆ- ಕಪೆ೯ ಮತ್ತು ಅಣ್ಣಳಿಕೆ- ಕರಿಮಲೆ ರಸ್ತೆ ಬಳಸುವಂತೆ ಸೂಚಿಸಲಾಗಿದೆ.