ಕೊರೊನಾ ಸಂಖ್ಯೆ ಹೆಚ್ಚಳ ಹಿನ್ನೆಲೆ ಈ ಕ್ರಮ, ವಿಟ್ಲ ಮೂಲಕ ನಿತ್ಯಕೆಲಸಕ್ಕೆಂದು ಹೋಗುವವರಿಗೆ ಇಲ್ಲ – ಪಪಂ ಮುಖ್ಯಾಧಿಕಾರಿ
ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ನಿರ್ಣಯದಂತೆ ವಿಟ್ಲ ಪೇಟೆಗೆ ಆಗಮಿಸುವ ಜನರ ಕೋವಿಡ್ ಪರೀಕ್ಷೆಯನ್ನು ಪಪಂ ನಡೆಸುತ್ತಿದ್ದು, ಈವರೆಗೆ ಸುಮಾರು 80 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ. ವಿಟ್ಲ ಪಟ್ಟಣ ಪಂಚಾಯತ್ ಕೊರೊನಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ಕೊರೊನಾ ನಿಯಂತ್ರಿಸಲು ವಾರಾಂತ್ಯ ಕರ್ಫ್ಯೂ ವಿಧಿಸಲಾಗಿತ್ತು, ವಿಟ್ಲದಲ್ಲಿ ಸುಮಾರು 62 ಸಕ್ರಿಯ ಪ್ರಕರಣಗಳಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಟ್ಲ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ 80 ಮಂದಿಯ ಪರೀಕ್ಷೆ ನಡೆಸಲಾಗಿದೆ. ಉಳಿದ ಸ್ಥಳವಾದ ನಾಡಕಚೇರಿ, ಮೇಗಿನಪೇಟೆ, ಬೊಬ್ಬೆಕೇರಿ ಗಳಲ್ಲಿ ದೇಹದ ಟೆಂಪರೇಚರ್ ಪರೀಕ್ಷಿಸಲಾಯಿತು. ಜನರಲ್ಲಿ ಕೊರೊನಾ ಜಾಗೃತಿ ಮೂಡಿಸಲಾಯಿತು. ಇಂದು ಒಂದೇ ಕಡೆ ತಪಾಸಣೆ ನಡೆಸಿದ್ದರೂ ನಾಳೆಯಿಂದ ಮತ್ತಷ್ಟು ಕಟ್ಟುನಿಟ್ಟುಗೊಳಿಸಲಾಗುತ್ತದೆ ಎಂದು ಪಪಂ ಮುಖ್ಯಾಧಿಕಾರಿ ಮಾಲಿನಿ ತಿಳಿಸಿದ್ದಾರೆ. ಅನಗತ್ಯ ಸಂಚಾರ ಮಾಡುವವರಿಗಷ್ಟೇ ಈ ಕ್ರಮ, ವಿಟ್ಲವನ್ನು ಹಾದುಹೋಗುವ ನಿತ್ಯಸಂಚಾರಿಗಳ ಟೆಸ್ಟ್ ಮಾಡಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಡಿವೈಎಫ್ ಐ ಆಕ್ಷೇಪ: ಜನರಿಗೆ ಯಾವುದೇ ವ್ಯವಸ್ಥೆ ಮಾಡದೆ ಕೇವಲ ಪೇಟೆ ಪ್ರವೇಶಿಸಬಾರದು ಎಂಬ ನಿಟ್ಟಿನಲ್ಲಿ ಕೊರೊನಾ ಟೆಸ್ಟ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿರುವ ಕ್ರಮಕ್ಕೆ ಡಿವೈಎಫ್ ಐ ತಾಲೂಕು ಕಾರ್ಯದರ್ಶಿ ತುಳಸೀದಾಸ್ ವಿಟ್ಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ.