ಬಂಟ್ವಾಳ: ಮಂಗಳವಾರ ರಾತ್ರಿಯಿಂದೀಚೆಗೆ ಬುಧವಾರವೂ ಸುರಿದ ಭಾರಿ ಮಳೆಯಿಂದ ಬಂಟ್ವಾಳ ತಾಲೂಕಿನ ಹಲವೆಡೆ ಹಾನಿಗಳುಂಟಾಗಿದೆ. ತೆಂಕ ಕಜೆಕಾರು ಗ್ರಾಮದ ಮಿತ್ತಲಿಕೆ ಮನೆ ಎಂಬಲ್ಲಿ ಇಬ್ರಾಯಿ ಬ್ಯಾರಿ ಅವರ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದಿದ್ದು ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದೆ, ಮನೆಯ ಹಲವು ಕಡೆ ಗೋಡೆ ಬಿರುಕು ಬಿಟ್ಟಿದ್ದು ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ ಮನೆಯವರನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲಾಗಿದೆ. ಮಣಿನಾಲ್ಕೂರು ಗ್ರಾಮದ ಆಚಾರಿಬೆಟ್ಟು ಎಂಬಲ್ಲಿ ಜನಾರ್ದನ ಅವರ ಮನೆಗೆ ಮರ ಬಿದ್ದು ತೀವ್ರ ಹಾನಿ ಆಗಿದೆ. ಪುಣಚ ಗ್ರಾಮದ ನಡುಸಾರು ಎಂಬಲ್ಲಿ ಪುಟ್ಟ ನಾಯ್ಕ ಅವರ ಮನೆಗೆ ತಾಗಿಕೊಂಡಿರುವ ಶೌಚಾಲಯಕ್ಕೆ ಮರದ ಕೊಂಬೆ ಬಿದ್ದು ಭಾಗಶಃ ಹಾನಿಯಾಗಿದೆ, ಶಂಭೂರು ಗ್ರಾಮದ ಸುಜಾತ ಅವರ ವಾಸ್ತವ್ಯದ ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆಗೆ ಮರ ಬಿದ್ದು ಹಾನಿಯಾಗುತ್ತದೆ. ನರಿಂಗಾನ ಗ್ರಾಮದ ಮೋರ್ಲ ಹಿತ್ತಿಲು ಎಂಬಲ್ಲಿ ಆಲಿಯಮ್ಮ ಎಂಬವರ ವಾಸದ ಮನೆಗೆ ಭಾಗಶಃ ಹಾನಿಯಾಗಿದೆ. ಮಂಚಿ ಗ್ರಾಮದ ಗಣಪತಿ ಅವರ ತಡೆಗೋಡೆ ಕುಸಿದುಬಿದ್ದಿದೆ. ಪಿಲಿಮೊಗರು ಗ್ರಾಮದ ಕೆಸೊಟ್ಟು ಎಂಬಲ್ಲಿರುವ ಕೇಶವ ಭಟ್ ಅವರ ಅಡಿಕೆ ತೋಟಕ್ಕೆ ಗಾಳಿ ಮಳೆಯಿಂದಾಗಿ ಹಾನಿಯಾಗಿದೆ.