ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಮಂಗಳವಾರ ಸುರಿದ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ನೇತ್ರಾವತಿ ನದಿ ನೀರಿನ ಮಟ್ಟ 4.8 ಮೀಟರ್ ಆಗಿದ್ದು, ಯಾವುದೇ ಅಪಾಯವಿಲ್ಲ. ಮಂಚಿ ಗ್ರಾಮದ ಕಡಂಗಳಿ ಎಂಬಲ್ಲಿ ಭಾಗೀರತಿ ಪೂಜಾರಿ ಎಂಬವರ ಮನೆಯ ಹಿಂದಿನ ಗೋಡೆ ಕುಸಿದಿದೆ. ಅಮ್ಟಾಡಿ ಗ್ರಾಮದ ಲೋಕನಾಥ ಎಂಬವರ ಮನೆಗೆ ತಾಗಿರುವ ಹಟ್ಟಿಗೆ ಮರ ಬಿದ್ದಿದೆ. ಪಂಜಿಕಲ್ಲು ಗ್ರಾಮದ ಪಾಂಗಾಳ ಎಂಬಲ್ಲಿರುವ ಅಣ್ಣು ಸಾಲಿಯಾನ್ ಎಂಬವರ ಅಡಿಕೆ ತೋಟದಲ್ಲಿ ಹಾನಿಯಾಗಿದೆ. ಶಂಭೂರು ಗ್ರಾಮದ ರಾಧಾ ಎಂಬವರ ಮನೆಗೆ ಹಾನಿಯಾಗಿರುತ್ತದೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮದ ಅಗ್ರಾರ್ ಇಜ್ಜ ಬಳಿ ದುಗ್ಗಮ್ಮ ಎಂಬವರ ಮನೆ ಮೇಲೆ ಗುಡ್ಡ ಕುಸಿದು ಮನೆಗೆ ಹಾನಿಯಾಗಿದೆ. ಇದರಿಂದ ಇವರ ಕುಟುಂಬವು ತೀವ್ರ ಸಂಕಷ್ಟಕ್ಕೀಡಾಗಿದೆ. ಅಗ್ರಾರ್ ದರ್ಬೆ ಎಂಬಲ್ಲಿ ಸಾರ್ವಜನಿಕ ಕಲ್ಲುರ್ಟಿ ದೇವಸ್ಥಾನದ ಆವರಣಗೋಡೆ ಸಂಪೂರ್ಣ ಕುಸಿದಿದೆ. ಬಂಟ್ವಾಳ ಪುರಸಭೆಯ ಒಂದನೇ ವಾರ್ಡ್ ಗೆ ಸೇರಿರುವ ಈ ಪ್ರದೇಶಗಳಿಗೆ ಪುರಸಭೆಯ ಸದಸ್ಯ ಬಿ.ವಾಸು ಪೂಜಾರಿ ಲೊರೆಟ್ಟೊ ಭೇಟಿ ನೀಡಿ, ಸ್ಥಳ ಪರಿಶೀಲಿಸಿ, ಸೂಕ್ತ ಪರಿಹಾರವನ್ನು ಸರ್ಕಾರದ ವತಿಯಿಂದ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.