ದೀನ್ ದಯಾಳ್ ಕಲ್ಪನೆ ಸಾಕಾರ – ನಳಿನ್ ಕುಮಾರ್ ಕಟೀಲ್
ಬಂಟ್ವಾಳ: ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಡುಲಚ್ಚಿಲ್ ಎಂಬಲ್ಲಿ ತನ್ನ ದೊಡ್ಡಮ್ಮನ ಮನೆಯಲ್ಲಿ ವಾಸಿಸುವ ತಾಯಿ ಇಲ್ಲದ ಇಬ್ಬರು ಪುಟ್ಟ ಹೆಣ್ಣುಮಕ್ಕಳಿಗೆ ತಲಾ 25 ಸಾವಿರ ರೂಪಾಯಿಗಳ ಬಾಂಡ್ ಹಾಗೂ ಪ್ರತಿ ತಿಂಗಳಿಗೆ ತಲಾ 2 ಸಾವಿರ ರೂ ಸಹಾಯಧನವನ್ನು ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಒದಗಿಸುವ ಮೂಲಕ ಬಂಟ್ವಾಳ ಬಿಜೆಪಿ ಆರಂಭಿಸಿದ ಕ್ಷೇಮನಿಧಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಕಟೀಲ್, ದೀನ್ ದಯಾಳ್ ಉಪಾಧ್ಯಾಯ ಅವರ ಅಂತ್ಯೋದಯ ಪರಿಕಲ್ಪನೆ ಇಂದು ಸಾಕಾರಗೊಳ್ಳುತ್ತಿದ್ದು, ದೇಶದಲ್ಲೇ ಮೊದಲ ಬಾರಿಗೆ ಬಂಟ್ವಾಳ ಬಿಜೆಪಿ ಈ ಕ್ಷೇಮನಿಧಿ ಕಾರ್ಯಕ್ರಮದ ಮೂಲಕ ಅರ್ಥಪೂರ್ಣವಾಗಿಸುತ್ತಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹಾಗೂ ಬಂಟ್ವಾಳ ಬಿಜೆಪಿಯ ಎಲ್ಲ ಪದಾಧಿಕಾರಿಗಳು ಅಭಿನಂದನಾರ್ಹರು ಎಂದು ಹೇಳಿದರು. ಯಡಿಯೂರಪ್ಪ ಅವರ ಪರಿಕಲ್ಪನೆಯಾದ ಭಾಗ್ಯಲಕ್ಷೀ ಯೋಜನೆ ಪ್ರೇರಣೆಯಾಗಿದೆ ಎಂದರು
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ ಬಿಜೆಪಿ ಕ್ಷೇಮನಿಧಿಯ ಅರ್ಹರಿಗೆ ಸಿಗುತ್ತಿದೆ. ಮಕ್ಕಳ ಭವಿಷ್ಯ ಉಜ್ವಲವಾಗಲಿ. ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳಿಗಾಗಿ ಆರಂಭಿಸಿದ್ದ ಈ ಯೋಜನೆ ಯನ್ನು ಸಂಕಷ್ಟ ಸ್ಥಿತಿಯಲ್ಲಿರುವ ಎಲ್ಲಾ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ವಿಸ್ತರಿಸಲಾಗಿದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪ್ರಮುಖರಾದ ಮಾಧವ ಮಾವೆ, ಪಂಚಾಯತ್ ಅಧ್ಯಕ್ಷೆ ನಾಗವೇಣಿ, ಪ್ರಮುಖರಾದ ಅಶೋಕ್ ಶೆಟ್ಟಿ ಸರಪಾಡಿ, ಧನಂಜಯ ಶೆಟ್ಟಿ ಸರಪಾಡಿ, ಚಿದಾನಂದ ರೈ, ಪುರುಷೋತ್ತಮ ಮಜಲು, ಶಶಿಕಾಂತ ಶೆಟ್ಟಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಸಾಂತಪ್ಪ ಪೂಜಾರಿ, ಸುದರ್ಶನ ಬಜ, ಪೂವಪ್ಪ ಪೂಜಾರಿ, ಉಮೇಶ್ ಅರಳ ಮೊದಲಾದವರು ಇದ್ದರು.
ಮೂರು ಮಕ್ಕಳ ಜೊತೆ ಇಬ್ಬರ ಹೊಣೆ: ಬಂಟ್ವಾಳ ತಾಲೂಕು ಮಂಚಿ ಗ್ರಾಮದ ದಿ.ಚಂದು ನಲ್ಕೆ-ದಿ.ಕಲ್ಯಾಣಿ ದಂಪತಿಗೆ ನಾಲ್ಕು ಮಕ್ಕಳು.ಲಕ್ಷ್ಮಿ,.ರೇವತಿ,.ಆನಂದ ಮತ್ತು ಅನಸೂಯ. ಇವರಲ್ಲಿ ರೇವತಿಯವರು ಕೃಷ್ಣಪ್ಪ ಎಂಬವರನ್ನು ಮದುವೆಯಾಗಿ ಅಜಿಲಮೊಗರು ನಡುಲಚ್ಚಿಲ್ ನಲ್ಲಿ ವಾಸವಾಗಿದ್ದು, ಇವರಿಗೆ ಉದಯ, ಆರತಿ, ನಿಖಿಲ್ ಎಂಬ ಮೂರು ಮಕ್ಕಳು. ರೇವತಿ ಅವರ ತಂಗಿ ಅನಸೂಯ ಅವರು ಬೆಳ್ತಂಗಡಿ ತಾಲೂಕಿನ ಪೆರಿಂಜೆ ಸೇಸಪ್ಪ ಎಂಬವರನ್ನು ವಿವಾಹವಾಗಿದ್ದು, ಇವರಿಗೆ ಅಂಕಿತಾ (2) ಮತ್ತು ಪೂರ್ವಿಕಾ (3 ತಿಂಗಳು) ಎಂಬಿಬ್ಬರು ಮಕ್ಕಳು. ಅನಸೂಯ ಎರಡನೇ ಹೆರಿಗೆಯ ಬಳಿಕ ಮೃತರಾಗಿದ್ದು ಇವರ ಗಂಡ ಸೇಸಪ್ಪ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರು.ತಂಗಿ ಅನಸೂಯ ನಿಧನ ಬಳಿಕ ಅವರ ಇಬ್ಬರು ಮಕ್ಕಳನ್ನು ಸಾಕುವ ಹೊಣೆಯನ್ನು ರೇವತಿಯವರೇ ವಹಿಸಿದ್ದು ಅಜಿಲಮೊಗರು ನಡುಲಚ್ಚಿಲ್ ಮನೆಯಲ್ಲಿ ಸಾಕುತ್ತಿದ್ದಾರೆ. ಪತಿ ಕೃಷ್ಣಪ್ಪ ದೈವ ನರ್ತಕ ರಾಗಿದ್ದು ಆರ್ಥಿಕವಾಗಿ ತೀರಾ ಇವರದ್ದು ತೀರಾ ಬಡ ಕುಟುಂಬ. ಈ ಹಿನ್ನೆಲೆಯಲ್ಲಿ ಅಂಕಿತಾ ಮತ್ತು ಪೂರ್ವಿಕಾ ಅವರಿಗೆ ಬಿಜೆಪಿ ಕ್ಷೇಮನಿಧಿ ವತಿಯಿಂದ ನೆರವು ನೀಡಲಾಗುತ್ತಿದೆ.