ರಾಜ್ಯದಾದ್ಯಂತ 6020ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಮತ್ತು ಇತರ ನಗರ, ಸ್ಥಳೀಯಾಡಳಿತ ಸಂಸ್ಥೆಗಳ ಸುಮಾರು 1ಲಕ್ಷ ಜನಪ್ರತಿನಿಧಿಗಳನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ತುರ್ತು ಲಸಿಕೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮಾಡಿದ ಮನವಿಯ ಹಿನ್ನಲೆಯಲ್ಲಿ, ಮುಖ್ಯಮಂತ್ರಿಯವರು ಮಾಡಿದ ಆದೇಶದಂತೆ, ರಾಜ್ಯ ಆರೋಗ್ಯ ಇಲಾಖೆ, ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಹಾಗೂ ನಗರ, ಸ್ಥಳೀಯಾಡಳಿತ ಸಂಸ್ಥೆಗಳಾದ ಮಹಾ ನಗರ ಪಾಲಿಕೆ, ನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತ್ ಗಳ ಸರ್ವ ಜನಪ್ರತಿನಿಧಿಗಳಿಗೆ ಈ ಪ್ರಾಶಸ್ತ್ಯದ ಲಸಿಕೆ ನೀಡಲಿದೆ.
ಜನರ ನಡುವೆ ಪಂಚಾಯತ್ ಕಾರ್ಯ ಪಡೆಗಳ ಮೂಲಕ ಕರೋನ ನಿಯಂತ್ರಿಸಲು ಶ್ರಮ ಪಡುತ್ತಿರುವ ಪಂಚಾಯತ್, ನಗರ, ಸ್ಥಳೀಯಾಡಳಿತ ಪ್ರತಿನಿಧಿಗಳಿಗೆ ಲಸಿಕೆ ನೀಡಲು ಆದೇಶ ನೀಡಿದಕ್ಕಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.