ಬಂಟ್ವಾಳ ಕ್ಷೇತ್ರದಲ್ಲಿ ಧಾರ್ಮಿಕ ಕೇಂದ್ರಗಳ ಸಂಪರ್ಕ ರಸ್ತೆ ಅಭಿವೃದ್ಧಿ – ಶಾಸಕ ರಾಜೇಶ್ ನಾಯ್ಕ್
ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಮಿತ್ತಮಜಲು ಕ್ಷೇತ್ರ ಸಂಪರ್ಕ ರಸ್ತೆ ಕಾಮಗಾರಿ 2 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದ್ದು, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬುಧವಾರ ವೀಕ್ಷಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಧಾರ್ಮಿಕ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗಳಿಗೆ ಆದ್ಯತೆ ನೀಡಲಾಗಿದ್ದು ಈಗಾಗಲೇ 15ಕ್ಕೂ ಅಧಿಕ ಕ್ಷೇತ್ರಗಳ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ ಎಂದರು.
ನಂದಾವರ ಕ್ಷೇತ್ರದ ರಿಂಗ್ ರೋಡ್, ಸರಪಾಡಿ ದೇವಸ್ಥಾನದ ಸಂಪರ್ಕ ರಸ್ತೆ, ಬೆಳ್ಳೂರು ಕಾವೇಶ್ವರ ದೇವಸ್ಥಾನ ರಸ್ತೆ ಸೇರಿ ಧಾರ್ಮಿಕ ಕ್ಷೇತ್ರಗಳ ಸಂಪರ್ಕ ರಸ್ತೆ ಅಭಿವೃದ್ಧಿಯ ಕುರಿತ ಮಾಹಿತಿಯನ್ನು ಶಾಸಕರು ನೀಡಿದರು. ಲಾಕ್ ಡೌನ್ ಸಮಯದಲ್ಲಿ ಸುಮಾರು 100 ಅಧಿಕ ರಸ್ತೆಗಳ ಕಾಮಗಾರಿ ಅಂತಿಮಗೊಂಡಿದ್ದು ಶೀಘ್ರದಲ್ಲೇ ಉದ್ಘಾಟನೆ ನೆರವೇರಿಸುತ್ತೇವೆ ಎಂದು ಶಾಸಕರು ಈ ಸಂದರ್ಭ ಹೇಳಿದರು. ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು, ಸಜೀಪಮೂಡ ಗ್ರಾ.ಪಂ. ಸದಸ್ಯರಾದ ಸೀತಾರಾಮ ಅಗೊಲಿಬೆಟ್ಟು, ಸೋಮನಾಥ ಬಂಗೇರ ಕಂದೂರು, ಪ್ರಶಾಂತ್ ಪೂಜಾರಿ, ಶಾಸಕರ ವಾರ್ ರೂಮ್ ಸದಸ್ಯರಾಧ ಪುರುಷೋತ್ತಮ ಶೆಟ್ಟಿ ವಾಮದಪದವು ಉಪಸ್ಥಿತರಿದ್ದರು