ಮಾಣಿ ಜಂಕ್ಷನ್ ನಲ್ಲಿ ಕೆಲ ದಿನಗಳ ಹಿಂದೆ ವಿಟ್ಲ ಎಸ್.ಐ. ವಿನೋದ್ ರೆಡ್ಡಿ ಅವರು ಸಾರ್ವಜನಿಕರ ಸಹಕಾರದೊಂದಿಗೆ ಅಪಘಾತಗಳು ಆಗಬಾರದು ಎಂಬ ಹಿತದೃಷ್ಟಿಯಿಂದ ಹಾಕಿಸಿದ್ದ ರಸ್ತೆ ವಿಭಜಕಗಳೂ ವಾಹನಗಳ ವೇಗದ ರಭಸಕ್ಕೆ ಸಿಲುಕಿ ಪುಡಿಪುಡಿಯಾಗಿವೆ.
ಶುಕ್ರವಾರ ರಾತ್ರಿ ಅತಿವೇಗವಾಗಿ ಬಂದ ವಾಹನವೊಂದು ಈ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುದರ ಪರಿಣಾಮ, ಈ ಡಿವೈಡರ್ ಗಳಲ್ಲಿ ಕೆಲವು ಹಾನಿಗೊಳಗಾಗಿವೆ. ಕೆಲವು ದಿನಗಳ ಹಿಂದೆ ಮಾಣಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 75 ಹಾಗೂ ರಾಷ್ಟ್ರೀಯ ಹೆದ್ದಾರಿ 275 ರ ಕೂಡು ರಸ್ತೆಯಲ್ಲಿ ಸುಸಜ್ಜಿತ ಹಾಗೂ ಸುರಕ್ಷಿತ ವಾಹನ ಚಾಲನೆಗೆ ಸ್ಥಳೀಯ ಸಾರ್ವಜನಿಕರ ಸಹಕಾರದೊಂದಿಗೆ ರಸ್ತೆ ವಿಭಾಜಕಗಳನ್ನು ಸ್ವಂತ ಮುತುವರ್ಜಿಯಿಂದ ಹಾಕಿಸಿದ್ದರು. ಪ್ರಸ್ತುತ ಕೊರೊನಾ ಎರಡನೆ ಅಲೆ ತಡೆಗೆ ಕರ್ಫ್ಯೂ ಇದ್ದರೂ ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತಿರುವುದು ಕಂಡುಬರುತ್ತಿದೆ. ಪ್ರತಿದಿನವೂ ಅಪಘಾತಕ್ಕೆ ಅಪಾಯ ತಂಡೊಡ್ಡುವ ಮಾಣಿ ಜಂಕ್ಷನ್ ನಲ್ಲಿ ಇವುಗಳನ್ನು ತಪ್ಪಿಸಲು ವೇಗದ ಸಂಚಾರಕ್ಕೆ ನಿಯಂತ್ರಣ ಹೇರಲು ಶಾಶ್ವತ ಪರಿಹಾರವೊಂದನ್ನು ಕಲ್ಪಿಸಬೇಕಾದ ಅನಿವಾರ್ಯತೆ ಇದ್ದು, ಆಡಳಿತ ಇದರ ಕುರಿತು ಗಮನಹರಿಸಬೇಕಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಹಾಗೂ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಸಂದಿಸುವ ಮಾಣಿ ಜಂಕ್ಷನ್ನಲ್ಲಿ ವಾಹನ ಸವಾರರ ಸುರಕ್ಷತೆಯ ಹಿತ ದೃಷ್ಟಿಯಿಂದ ವಿಟ್ಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿನೋದ್ ರೆಡ್ಡಿಯವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ, ಊರ ನಾಗರಿಕರ ಸಂಪೂರ್ಣ ಸಹಕಾರದೊಂದಿಗೆ ರಸ್ತೆ ವಿಭಾಜಕಗಳನ್ನು ಮೇ.13ರಂದು ಅಳವಡಿಸಲಾಗಿತ್ತು. ಎರಡು ಹೆದ್ದಾರಿ ಗಳು ಸಂದಿಸುವ ಜಾಗದಲ್ಲಿ ಈ ರಸ್ತೆ ವಿಭಾಜಕ ದ ನಿರ್ಮಾಣ ಮುಂದಿನ ದಿನಗಳಲ್ಲಿ ರಸ್ತೆ ಯಲ್ಲಿ ವಾಹನಗಳ ವ್ಯವಸ್ತಿತ ಓಡಾಟಕ್ಕೆ ಅನುವು ಮಾಡಿಕೊಡಲಿದೆ ಎಂದು ನಂಬಲಾಗಿತ್ತು.