ಬಂಟ್ವಾಳ: ಬಂಟ್ವಾಳ ಮಿನಿ ವಿಧಾನಸೌಧದ ತಹಶೀಲ್ದಾರ್ ಕಚೇರಿಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿಗೆ ವರ್ಗಾವಣೆಗೊಂಡ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಕಂದಾಯ ಇಲಾಖೆಯಿಂದ ಶನಿವಾರ ಬೀಳ್ಕೋಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್ ಪುಷ್ಪರಾಜ್ ಪೂಜಾರಿ ಕಂದಾಯ ಮತ್ತು ಸರ್ವೆ ಇಲಾಖೆಗಳ ಮಧ್ಯೆ ಯಾವುದೇ ವ್ಯತ್ಯಾಸ ಇಲ್ಲದಂತೆ ಪರಸ್ಪರ ಸಹಕಾರದಿಂದ ಕರ್ತವ್ಯ ನಿರ್ವಹಿಸಲು ಕಾರಣಕರ್ತರಾಗಿದ್ದರು ಎಂದರು. ಕಚೇರಿ ಸಿಬ್ಬಂದಿಯವರ ಪರವಾಗಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಮಾತನಾಡಿ ಕಡು ಬಡವರಿಂದ ಹಿಡಿದು ಎಲ್ಲಾ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳ ಜೊತೆ ಅತ್ಯಂತ ಆತ್ಮೀಯತೆಯಿಂದ ವ್ಯವಹರಿಸುವ ಅಧಿಕಾರಿ ಎಂದು ಹೇಳಿದರು. ಬಳಿಕ ಪುಷ್ಪರಾಜ್ ಅವರಿಗೆ ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬಂಟ್ವಾಳ ತಾಲೂಕಿನಲ್ಲಿ ಕಂದಾಯ ಇಲಾಖೆಯಿಂದ ದೊರೆತ ಸಹಕಾರ ಮರೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಯಶಸ್ಸು ಸಾಧಿಸಬಹುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು, ಉಪತಹಸೀಲ್ದಾರ್ ರಾಜೇಶ್ ನಾಯ್ಕ್, ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ನವೀನ್ ಬೆಂಜನಪದವು ತಾಲೂಕು ಕಚೇರಿ ಸಿಬ್ಬಂದಿ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತರಿದ್ದರು ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.