ತಮನ್ನಾ ನಟಿಸಿದ ವೆಬ್ ಸರಣಿ – ವಾರಾಂತ್ಯದ ವೀಕ್ಷಣೆ
ವಿಮರ್ಶೆ: ಪ್ರಶಾಂತ್ ಭಟ್
(ಲೇಖಕರು – ವಿಮರ್ಶಕರು)
ಇತ್ತೀಚೆಗೆ ವೆಬ್ ಸರಣಿಗಳು ಐದೇ ಎಪಿಸೋಡಿಗೆ ಇರುವ ಕತೆಯನ್ನು ಹಿಂಜಿ ಏಳೋ ಎಂಟೋ ಎಪಿಸೋಡುಗಳ ಮಾಡಿ ನಮ್ಮ ತಾಳ್ಮೆಯನ್ನು ಪರಿಶೀಲಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿವೆ.
ಈ ಸರಣಿಯೂ ಹಾಗೇ..
ಹಾಟ್ ಸ್ಟಾರ್ ನಲ್ಲಿ ಇದು ಲಭ್ಯ.
ಆಲ್‌ಝೈಮರ್ ಖಾಯಿಲೆ ಇರುವ ಕ್ರೈಮ್ ಕಾದಂಬರಿಕಾರ, ಅವನ ಮಗಳು. ಅವಳಿಗೆ ತಮ್ಮ ಮನೆಯನ್ನು ಮಾರಬೇಕು ಎಂದು ಆಸೆ. ಅವಳಪ್ಪ ಬಿಡುತ್ತಾ ಇಲ್ಲ. ಇದರ ನಡುವೆ ಇವಳು ಕೆಲಸ ಮಾಡುವ ಪೋಲಿಸ್ ಸ್ಟೇಷನ್ ಅಲ್ಲಿ ಹಳೆಯ ಎಫ್.ಐ.ಆರ್‌ಗಳ ಡಿಜಿಟಲೈಸ್ ಮಾಡುವಾಗ ಅನಿರೀಕ್ಷಿತವಾಗಿ ನಡೆಯುವ ಹ್ಯಾಕಿಂಗ್. ಇವರ ಹಳೆಯ ಮನೆಯಲ್ಲಿ ನಡೆಯುವ ಒಂದು ಕೊಲೆ,ಎಲ್ಲೋ ದೂರದ ಹೈದರಾಬಾದ್‌ನಲ್ಲಿ ನಡೆವ ಇನ್ನೊಂದು ಕೊಲೆ ಇವೆಲ್ಲದರ ಸಂಬಂಧ ಏನು? ಇದು ಸ್ಥೂಲವಾಗಿ ಕತೆ.
ಸರಣಿ ನಿಜಕ್ಕೂ ಚೆನ್ನಾಗಿದೆ. ಕತೆ ತೆಗೆದುಕೊಂಡು ಹೋದ ರೀತಿ ‘ ಒರೇ ಕೊಳಪ್ಪಮಾ ಇರುಕ್ಕು’ (ಗೊಂದಲಪೂರ್ಣ) . ಆದರೆ ಅಂತ್ಯದಲ್ಲಿ ಎಲ್ಲಾ ಸಿಕ್ಕುಗಳೂ ಬಿಡಿಸಲ್ಪಡುತ್ತವೆ. ಹಿನ್ನೆಲೆ ಸಂಗೀತ ಪರಿಣಾಮಕಾರಿ. ತಮನ್ನಾ ಸ್ವಲ್ಪ ಗಟ್ಟಿ ಮಾತಾಡಮ್ಮಾ ಅಂತ ಮೊದಲೆರಡು ಎಪಿಸೋಡ್ ಕೂಗುವ ಎಂದಾಗುತ್ತದೆ. ಸರಣಿಯಲ್ಲಿ ಜಸ್ಟಿಫಿಕೇಷನ್ ಕೊಡುವ ಆ ಕಾರಣ ಸಕಾರಣವಾ? ದೇವರಿಗೇ ಗೊತ್ತು? ಮಗಳ ಅಪ್ಪನಾಗಿ ನನಗೆ ಅದು ಗಂಟಲಲ್ಲಿ ಕಹಿ ರುಚಿ ಉಳಿಸಿತು. ಯಾವುದೇ ರಾಜಕೀಯದ ಸೋಂಕು ಇಲ್ಲದ ,ಒಂದು ಕಾದಂಬರಿ ಓದಿದ ಹಾಗೆ ಅನಿಸುವ , ನಡು ನಡುವೆ ಎದ್ದು ಹೋದರೂ ಅಯ್ಯೋ ಮಿಸ್ ಆಯ್ತಲ್ಲ ಎಂದು ಅನಿಸದ ಸರಣಿ. ಸ್ವಲ್ಪ ಕ್ರಿಸ್ಪ್ ಆದರೆ ಹದವಾಗಿ ಕರಿದ ವಡೆಯಾಗುತ್ತಿತ್ತು. ಆರಾಮಾಗಿ ನೋಡಬಹುದು. ರೇಟಿಂಗ್ 3.5/5