ಬಂಟ್ವಾಳ ಪುರಸಭೆ 1ರಿಂದ 5ನೇ ವಾರ್ಡ್ ಕಾರ್ಯಪಡೆ ಸಭೆ
ಬಂಟ್ವಾಳ: ಕೇವಲ ಫೈನ್ ಹಾಕುವುದು ಕೋವಿಡ್ ಡ್ಯೂಟಿಯಲ್ಲ, ಪುರಸಭೆಯ ಪ್ರತಿಯೊಂದು ವಾರ್ಡಿನ ಪ್ರತಿಯೊಂದು ಸೋಂಕಿತರ ಕುರಿತು ನಿಗಾ ವಹಿಸಬೇಕು, ಸದಸ್ಯರಿಗೆ ಪ್ರತಿ ಮಾಹಿತಿಯನ್ನು ಒದಗಿಸಿ, ಕೊರೊನಾ ಸೋಂಕು ಇಳಿಮುಖವಾಗಿಸಲು ಕ್ರಮ ಕೈಗೊಳ್ಳಬೇಕು, ಅಧಿಕಾರಿಗಳು ಪ್ರತಿಷ್ಠೆ ಬಿಟ್ಟು ಹೊಂದಾಣಿಕೆಯಿಂದ ಕೆಲಸ ಮಾಡಿ ಎಂದು ಬಂಟ್ವಾಳ ಪುರಸಭೆಯಲ್ಲಿ ಬುಧವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸೂಚನೆ ನೀಡಿದ್ದಾರೆ.
ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ ಡಿಸೋಜ ಉಪಸ್ಥಿತಿಯಲ್ಲಿ ಬಂಟ್ವಾಳ ಪುರಸಭೆಯ ಮೊದಲ ಐದು ವಾರ್ಡುಗಳ ಸಭೆಯಲ್ಲಿ ಸದಸ್ಯರಾದ ಜನಾರ್ದನ ಚಂಡ್ತಿಮಾರ್, ಗಂಗಾಧರ್ ಅವರು, ವಾರ್ಡ್ ಸಭೆಗಳ ಕುರಿತಾಗಲೀ, ಯಾವುದೇ ವಿಚಾರಕ್ಕಾಗಲೀ ಅಧಿಕಾರಿ ವರ್ಗದಿಂದ ಸ್ಪಷ್ಟ ಮಾಹಿತಿಗಳು ದೊರಕುವುದಿಲ್ಲ ಎಂಬುದನ್ನು ಶಾಸಕರ ಗಮನ ಸೆಳೆದ ಸಂದರ್ಭ ಮಾತನಾಡಿದ ರಾಜೇಶ್ ನಾಯ್ಕ್, ಪ್ರತಿಯೊಬ್ಬ ವಾರ್ಡ್ ಸದಸ್ಯರಿಗೂ ಕೋವಿಡ್ ವಿಚಾರದ ಕುರಿತು ಸ್ಪಷ್ಟ ಮಾಹಿತಿ ಇರಬೇಕು, ವಾರ್ಡ್ ಕಮಿಟಿಯ ಸ್ವರೂಪ, ಕೋವಿಡ್ ಸೋಂಕಿತರ ವಿವರ, ಪ್ರಾಥಮಿಕ ಸೋಂಕಿತರ ಕುರಿತ ಮಾಹಿತಿ ಸಹಿತ ಸಂಪೂರ್ಣ ವಿವರಗಳನ್ನು ಅವರಿಗೆ ಅಧಿಕಾರಿಗಳು ನೀಡಿದರೆ, ಸೋಂಕಿತರ ಕುರಿತು ನಿಗಾ ಇರಿಸಲು ಸಹಕಾರಿಯಾಗುತ್ತದೆ ಎಂದರು. ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಜವಬ್ದಾರಿಯಿಂದ ಕೆಲಸ ಮಾಡಿ, ಜನರ ಆರೋಗ್ಯದ ವಿಚಾರವಿದು ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರಿಗೆ ಕಿವಿಮಾತು ಹೇಳಿದ ಶಾಸಕರು, ಪುರಸಭೆಯ ಟಾಸ್ಕ್ ಫೋರ್ಸ್ ಸಮಿತಿಗೆ ಸಂಬಂಧಪಟ್ಟ ವಾರ್ಡ್ ಸದಸ್ಯರೇ ಮುಖ್ಯಸ್ಥರು. ಅದರ ಕಾರ್ಯವೈಖರಿಯ ಬಗ್ಗೆ ಪುರಸಭಾ ಅಧ್ಯಕ್ಷರು ಮೇಲ್ವಿಚಾರಣೆ ಮಾಡಬೇಕು ಎಂದರು.
ಟಾಸ್ಕ್ ಫೋರ್ಸ್ ಅನ್ನು ಮತ್ತಷ್ಟು ಸಕ್ರಿಯವಾಗಿಸುವ ಕುರಿತು ಪುರಸಭೆಯ ಎಲ್ಲ ಸದಸ್ಯರ ಸಭೆ ಕರೆಯಲಾಗುವುದು ಎಂದು ಅಧ್ಯಕ್ಷ ಮಹಮ್ಮದ್ ಶರೀಫ್ ಹೇಳಿದರು. ಐದು ವಾರ್ಡುಗಳಲ್ಲಿ 107 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಪ್ರಸ್ತುತ 52 ಸಕ್ರೀಯ ಪ್ರಕರಣಗಳಿದೆ ಇಬ್ಬರು ವೆನ್ಲಾಕ್ ಮತ್ತು ಬಂಟ್ವಾಳಗಳಲ್ಲಿ ಅಡ್ಮಿಟ್ ಆಗಿದ್ದಾರೆ ಎಂದು ಡಾ. ಅಶ್ವಿನಿ ಮಾಹಿತಿ ನೀಡಿದರು. ದಿನಾ ಕೂಲಿಗೆ ಹೋಗುವವರಿಗೆ ಶಾಸಕರ ವಾರ್ ರೂಮ್ ಮೂಲಕ ನೆರವು ದೊರಕುತ್ತದೆ ಈಗಾಗಲೇ ಪುರಸಭೆಯ 23 ಮನೆಗಳಿಗೆ ಕೊಡಲಾಗಿದೆ ಎಂದು ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಮಾಹಿತಿ ನೀಡಿದರು. ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಸಲಹೆ ಸೂಚನೆ ನೀಡಿದರು. ವೈದ್ಯಾಧಿಕಾರಿ ಡಾ.ಅಶ್ವಿನಿ ಮಾಹಿತಿ ನೀಡಿದರು. ಪುರಸಭಾ ಉಪಾಧ್ಯಕ್ಷೆ ಜೆಸಿಂತಾ, ಬುಡ ಅಧ್ಯಕ್ಷ ದೇವದಾಸ ಶೆಟ್ಟಿ, ಪುರಸಭಾ ಸದಸ್ಯರಾದ ಜನಾರ್ಧನ ಚೆಂಡ್ತಿಮಾರ್, ಗಂಗಾಧರ ಪೂಜಾರಿ, ಮೀನಾಕ್ಷಿ ಗೌಡ, ರೇಖಾ ಪೈ, ದೇವಕಿ, ಸಿ.ಡಿ.ಪಿ.ಒ ಗಾಯತ್ರಿ ಕಂಬಳಿ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಎ.ಎಸ್.ಐ.ಜಿನ್ನಪ್ಪ ಗೌಡ, ಶಾಸಕರ ವಾರ್ ರೂಮ್ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.