ಬಂಟ್ವಾಳ: ಹಿರಿಯ ಸಹಕಾರಿ, ಸಮಾಜಸೇವಕ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಕೊಂಬಿಲ ನಾರಾಯಣ ಶೆಟ್ಟಿ (76) ಅಲ್ಪಕಾಲದ ಅಸೌಖ್ಯದ ಬಳಿಕ ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅವರು ಹೊಂದಿದ್ದರು. ನೇರಳಕಟ್ಟೆ ವ್ಯವಸಾಯ ಸಹಕಾರಿ ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇದರ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಜನಸಂಘದ ಕಾರ್ಯಕರ್ತರಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಮಂದಿರ ಕರಸೇವೆಯಲ್ಲಿ ಭಾಗವಹಿಸಿದ್ದರು. ಬಂಟ್ವಾಳ ತಾಲೂಕಿನ ವಿಶ್ವ ಹಿಂದು ಪರಿಷತ್ತಿನ ಕಾರ್ಯದರ್ಶಿಯಾಗಿ, ಅನಂತಾಡಿ ಗ್ರಾಮದ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಂದರ್ಭ ಪ್ರಮುಖ ಪಾತ್ರ ವಹಿಸಿದ್ದರು.