ಪುರಸಭೆಯಲ್ಲಿ 12 ಸಾವಿರಕ್ಕೂ ಮಿಕ್ಕಿ ಮನೆ, ವಾಣಿಜ್ಯ ಕಟ್ಟಡಗಳಿದ್ದು, ಹೆಚ್ಚಿನ ಮನೆಗಳ ತ್ಯಾಜ್ಯಗಳು ವಿಲೇವಾರಿ ವಾಹನಗಳಲ್ಲಿ ಸಾಗುತ್ತವೆ. ಮನೆಯವರು ಮಾಡಬೇಕಾದದ್ದು ಇಷ್ಟೇ.. ಹಸಿ ಕಸ, ಒಣ ಕಸವನ್ನು ಬೇರ್ಪಡಿಸಿ ಇಡುವುದು. ಕೆಲವರು ಅದನ್ನೂ ಮಾಡುತ್ತಿಲ್ಲ. ಯಾರೂ ಮನೆಯಿಂದ ಹೊರಬರಬಾರದು ಎಂಬ ಕಟ್ಟಪ್ಪಣೆ ಇರುವಾಗ ಮನೆಯಿಂದ ಹೊರಬಂದು ರಿಸ್ಕ್ ವಹಿಸಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಸರಿಯಾದ ವಿಧಾನದಲ್ಲಿ ಕಸವನ್ನು ನೀಡುವುದು ನಮ್ಮ ಕರ್ತವ್ಯವೂ ಹೌದು.
ಪೌರಕಾರ್ಮಿಕರಲ್ಲಿ ಹಲವರಿಗೆ ಕೊರೊನಾ ಪಾಸಿಟಿವ್ ಕೂಡ ಬಂದಿದೆ. ಸದ್ಯ ನಾಲ್ವರು ಕೋವಿಡ್ ನಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಆತಂಕದ ನಡುವೆಯೂ ಪೌರಕಾರ್ಮಿಕರು ತಮ್ಮ ಕೆಲಸಕ್ಕೆ ವಿರಾಮ ಹಾಕಿಲ್ಲ. ಸೋಂಕಿತರ ಮನೆಯನ್ನು ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಗುರುತಿಸಲಾಗಿದ್ದು, ಇವುಗಳ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವಾಹನವಿರುತ್ತದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆವರೆಗೆ ದುಡಿಯುವ ಪೌರಕಾರ್ಮಿಕರ ಕೆಲಸ ಕಠಿಣ. ಕಳೆದ ವರ್ಷ ಕೊರೊನಾ ಸಂದರ್ಭ ಕಿಟ್ ಮತ್ತಿತರ ನೆರವನ್ನು ನೀಡಲಾಗಿತ್ತು. ಎಲ್ಲರನ್ನೂ ಮನೆಯೊಳಗಿರಿ ಎಂಬ ಸಂದೇಶವನ್ನು ಮನೆಮನೆಗೆ ತಲುಪಿಸುವ ಕಾರ್ಯ ಮಾಡುವವರ ಸುರಕ್ಷತೆಯ ಕುರಿತ ಕಾಳಜಿ ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು.
ಹರೀಶ ಮಾಂಬಾಡಿ, www.bantwalnews.com