16 ಸಕ್ರಿಯ ಪ್ರಕರಣಗಳು – ನಿಗಾ ವಹಿಸುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚನೆ
ಬಂಟ್ವಾಳ: ತಾಲೂಕಿನ ವಿಟ್ಲಪಡ್ನೂರಿನಲ್ಲಿ ಕಾರ್ಯಪಡೆ ಸಭೆಯನ್ನು ಶುಕ್ರವಾರ ನಡೆಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಹೊರರಾಜ್ಯದಿಂದ ಬಂದವರ ಕುರಿತು ನಿಗಾ ವಹಿಸಿ, ಕ್ವಾರಂಟೈನ್ ಗೆ ಒಳಪಡಿಸುವಂತೆ ಸೂಚಿಸಿದರು.
ಕೊರೊನಾ ಕುರಿತು ಜನಜಾಗೃತಿ ಮೂಡಿಸಬೇಕು, ಲಸಿಕೆ ವಿಚಾರದಲ್ಲಿ ಕಾರ್ಯಪಡೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಈ ಸಂದರ್ಭ ಅವರು ಹೇಳಿದರು. ಈ ಗ್ರಾಮದಲ್ಲಿ ಶುಕ್ರವಾರ 16 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ 12 ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಸಹಾಯಕಿ ಮಾಹಿತಿ ನೀಡಿದರು.
ತಹಶೀಲ್ದಾರ್ ರಶ್ಮಿ ಎಸ್. ಆರ್. ಮಾತನಾಡಿ, ಲಸಿಕೆ ಪಡೆಯದೇ ಇರುವವರು ನೋಂದಣಿ ಮಾಡಿಕೊಂಡ ಬಳಿಕವಷ್ಟೇ ಪ್ರಥಮ ಲಸಿಕೆ ನೀಡಲಾಗುತ್ತದೆ, ಈ ಕುರಿತಾಗಿ ಹೆಚ್ಚಿನ ಪ್ರಚಾರ ಅಗತ್ಯ ಎಂದು ತಿಳಿಸಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ವಾರಕ್ಕೆ ಒಂದು ಸಭೆ ನಡೆಸಬೇಕು, ಪಂಚಾಯಿತಿ.ಮಟ್ಟದ ಆಶಾ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೇಸರ್, ಕೊಡೆಯಂಥ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪಂಚಾಯತ್ ಅನುದಾನ ಬಳಸುವಂತೆ ಸೂಚಿಸಿದರು. ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಶ್ಮಾಶಂಕರಿ, ಉಪಾಧ್ಯಕ್ಷ ನಾಗೇಶ್ ಕುಮಾರ್, ಪಿ.ಡಿ.ಒ.ಸುಜಯ, ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಗ್ರಾಮಕರಣಿಕ ವೈಶಾಲಿ ,ಶಾಸಕರ ವಾರ್ ರೂಂ ಪ್ರಮುಖರಾದ ದೇವದಾಸ ಶೆಟ್ಟಿ, ರವೀಶ್ ಶೆಟ್ಟಿ ಕರ್ಕಳ, ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.