ಬಂಟ್ವಾಳ: ಬಂಟ್ವಾಳದಲ್ಲಿ ಕೊರೋನಾ ನಿಗ್ರಹದ ವೈದ್ಯಕೀಯ ಸೌಲಭ್ಯದಲ್ಲಿ ಯಾವುದೇ ಕೊರತೆಇಲ್ಲ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಕನ್ಯಾನದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಹೇಳಿದ್ದಾರೆ.
ಮುಂಜಾಗ್ರತೆಯ ದೃಷ್ಟಿಯಿಂದ ಬಂಟ್ವಾಳ ಹಾಗೂ ವಾಮದಪದವಿನಲ್ಲಿ ಆಕ್ಸಿಜನ್ ಉತ್ಪಾದನಾ ಘಟಕದ ನಿರ್ಮಾಣಕಾರ್ಯ ನಡೆಯುತ್ತಿದೆ ಗ್ರಾಮದೊಳಗಿನ ಜಾಗೃತಿ ನಿರಂತರವಾಗಬೇಕು, ಆಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಿದೆ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಗ್ರಾಮಸ್ಥರಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ತಹಶೀಲ್ದಾರ್ ರಶ್ಮಿ ಎಸ್. ಆರ್. ಮಾತನಾಡಿ, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಿರುವ ದಾಖಲೆ ಇದ್ದವರಿಗೂ ರೇಷನ್ ಲಭ್ಯವಾಗಬೇಕು ಎನ್ನುವ ಕುರಿತಾಗಿ ಸರ್ಕಾರದ ಗಮನಕ್ಕೆ ತರಲಾಗಿದೆ, ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದರು. ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ಪಂ.ಮಟ್ಟದಲ್ಲಿ ಕೋವಿಡ್ ನಿರ್ಮೂಲನೆಗೆ ಟಾಸ್ಕ್ ಫೋರ್ಸ್ ಸಮಿತಿ ಜವಬ್ದಾರಿಯಿಂದ ಕೆಲಸ ಮಾಡಬೇಕು, ಇದಕ್ಕೆ ಪೂರಕವಾಗಿ ಪಂ.ಅನುದಾನ ಬಳಸುವಂತೆ ಸೂಚನೆ ನೀಡಿದರು. ಕನ್ಯಾನ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹಮಾನ್, ಉಪಾಧ್ಯಕ್ಷ ಕುಸುಮಾ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪಿ.ಡಿ.ಒ.ವಿಜಯಶಂಕರ ಅಳ್ವ, ಕಂದಾಯ ನಿರೀಕ್ಷಕ ದಿವಾಕರ ಮುಗುಳ್ಯ , ಗ್ರಾಮಕರಣಿಕ ಪ್ರಶಾಂತ್, ವೈದ್ಯಾಧಿಕಾರಿ ಫಿಯೋಲಿನ್ ಡಿ.ಸೋಜ, ಶಾಸಕರ ವಾರ್ ರೂಂ ಪ್ರಮುಖರಾದ ಪುರುಷೋತ್ತಮ ಶೆಟ್ಟಿ ವಾಮದಪದವು, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.