ಜೋರು ಗಾಳಿ ಮಳೆಗೆ ಮನೆ ಪಕ್ಕ ಮರ ಬಿದ್ದೋ ಅಥವಾ ಮಣ್ಣು ಕುಸಿದು ತೋಡು ಬ್ಲಾಕ್ ಆಗಿರಬಹುದು. ತಕ್ಷಣ ನಿಮ್ಮ ಪಂಚಾಯಿತಿ ಸದಸ್ಯರಿಗೆ ಕಾಲ್ ಮಾಡಿ ಸರಿ ಮಾಡಿಸಿ ಕೊಡಿ ಅಂತ ನೀವು ಕೇಳಿರಬಹುದು. ಆ ಕಡೆಯಿಂದ ನಮಗೆ ಕರೆಂಟ್ ಬಿಲ್ ಕಟ್ಲಿಕ್ಕೆ ಪಂಚಾಯಿತಿ ಯಲ್ಲಿ ದುಡ್ಡಿಲ್ಲ ಎಂದೇನಾದರೂ ಬಂದರೆ? ಅಂಥದ್ದೇನಿಲ್ಲ, ನಿಮ್ಮ ಪಂಚಾಯಿತಿಯ ಕುರಿತ ಮಾಹಿತಿ ನನಗೂ ಗೊತ್ತಿದೆ ಎಂದು e-GramSwaraj App ಬಗ್ಗೆ ಹೇಳಿ.
ಪಂಚಾಯಿತಿ ಯಾವುದಕ್ಕೆ ಎಷ್ಟು ಅನುದಾನ ಮಂಜೂರು ಮಾಡಿರುತ್ತದೆ? ನಮ್ಮ ಸುತ್ತಮುತ್ತ ಆಗುವ ಕೆಲಸ ಯಾವುದು? ಈ ಕುರಿತು ನಮ್ಮಷ್ಟಕೆ ಮನದಲ್ಲೇ ಚಿಂತಿಸುವ ನಾವು, ಗ್ರಾಮ ಸಭೆಗೆ ಹೋಗಿ ಪ್ರಶ್ನೆ ಮಾಡಲು ಹಿಂಜರಿಯುತ್ತೇವೆ. ಒಂದು ವೇಳೆ ಅಲ್ಲೇನಾದರೂ ತಪ್ಪಾಗುತ್ತಿದೆಯಾ ಎಂಬ ಅನುಮಾನ ಕಾಡಿದರೂ ನಾವು ಅದನ್ನು ಯಾರಲ್ಲಿ ಪ್ರಶ್ನೆ ಮಾಡುವುದು? ಆರ್.ಟಿ.ಐ. ಹಾಕುವುದಾ ಅಥವಾ ಬೇರೇನು ಮಾಡಬೇಕು ಎಂದು ಚಿಂತಿಸುತ್ತೇವೆ. ಆದರೆ ಪಂಚಾಯತ್ ಕಾಮಗಾರಿ ಬಗ್ಗೆ ಸುಲಭವಾಗಿ ನಮ್ಮ ಗ್ರಾಮ ಪಂಚಾಯತ್‌ಗೆ ಬರುವ ವಾರ್ಷಿಕ ಅನುದಾನದ ಲೆಕ್ಕವನ್ನು ನಾವು ಅಂಗೈಯಲ್ಲೇ ಪಡೆಯಲು ಸಾಧ್ಯ. ಸಾಮಾನ್ಯವಾಗಿ ಗ್ರಾಮ ಸಭೆ ವಾರ್ಡ್ ಸಭೆ ಬೇರೆ ಬೇರೆ ವಿಚಾರಗಳ ಕುರಿತ ಚರ್ಚೆಗಳಲ್ಲೇ ಮುಳುಗಿಹೋದರೆ, ಆ ಸಂದರ್ಭ ಅನುದಾನದ ವಿಚಾರ ಹಾಗೆಯೇ pass ಆಗುವುದೂ ಉಂಟು ಎಂಬ ಅನುಮಾನ ನಿಮಗೂ ಕಾಡಬಹುದು. ಮನೆ ಪಕ್ಕದಲ್ಲೇ ನಡೆಯದ ಕಾಮಗಾರಿಗೆ ಬಿಲ್ ಪಾಸ್ ಆಗಿದ್ದರೂ ಅದು ನಿಮಗೆ ಗೊತ್ತೇ ಇರುವುದಿಲ್ಲ. ಇನ್ನೂ ಮುಂದಾದರೂ ಎಚ್ಚರಿಕೆಯಿಂದ ಇರೋಣ. ಗ್ರಾಮ ಸಭೆಗೆ ಹೋಗದ ನಮಗೆ RTI ದೂರದ ಮಾತು. ಆದರೆ ಪಂಚಾಯತ್ ಕಾಮಗಾರಿ ಬಗ್ಗೆ ಸುಲಭವಾಗಿ ನಮ್ಮ ಅಂಗೈಯಲ್ಲೇ ಕಣ್ಣಿಟ್ಟು ಭ್ರಷ್ಟಾಚಾರವೇನಾದರೂ ಆದರೆ ಅದನ್ನು ಗುರುತಿಸಬಹುದು. ಅಂಗೈಯಲ್ಲೇ ಕಣ್ಣಿಡೋದು ಹೇಗೆ?
ಪ್ಲೇ ಸ್ಟೋರ್ ಗೆ ಹೋಗಿ e-GramSwaraj ಅನ್ನೋ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ಇದು ಪಂಚಾಯತ್ ರಾಜ್ ಇಲಾಖೆಯಿಂದ ಬಿಡುಗಡೆಯಾಗಿರುವ ಅಪ್.ಇನ್‌ಸ್ಟಾಲ್ ಮಾಡಿ ಓಪನ್ ಮಾಡಿದ ನಂತರ ನಿಮ್ಮ ರಾಜ್ಯ,ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್, ಕೊನೆಗೆ ಗ್ರಾಮ ಪಂಚಾಯತ್ ಆಯ್ಕೆ ಮಾಡಿ ಸಬ್ಮಿಟ್ ಬಟನ್ ಒತ್ತಿ. ಇಲ್ಲಿ ನಿಮಗೆ financial year ಯಾವ ವರ್ಷದ್ದು ಎಂದು ಆಯ್ಕೆ ಮಾಡಿ ಕೆಳಗೆ approved activities ಮತ್ತು financial progress ಅನ್ನೋ ಆಯ್ಕೆಗಳು ಇರುತ್ತವೆ. ಕ್ಲಿಕ್ ಮಾಡಿದಾಗ ಅನುದಾನ ಮಂಜೂರಾತಿ ಮೊತ್ತ , ಸದ್ಯ ನಡೆಯುತಿರುವ ಕಾಮಗಾರಿಗಳು details ಬಟನ್ ಒತ್ತಿ ನೋಡಬಹುದು. ಅನುದಾನ ಮಂಜೂರಾತಿ ಹಣಕಾಸು ಆಯೋಗದ ಅಥವಾ ನರೇಗಾ ದ್ದಾ ಅಂತಾನೂ ಚೆಕ್ ಮಾಡಬಹುದು. ಎಲ್ಲವೂ ಪಾರದರ್ಶಕ ಈಗ. ಕ್ಷಣ ಮಾತ್ರದಲ್ಲಿ ನಿಮ್ಮ ಅಂಗೈಯಲ್ಲಿ ಮಾಹಿತಿ ಪಡೆಯಬಹುದು. ನಿಮಗೆ ಅನುಮಾನ ಅನಿಸಿದರೆ ಅಧ್ಯಕ್ಷರಿಗೋ PDO ಗೋ ಕರೆ ಮಾಡಿ ಮಾಹಿತಿ ತಿಳಿಯಬಹುದು. ದಕ್ಷ ಆಡಳಿತ ನಮ್ಮ ಕೈಯಲ್ಲೇ ಇದೆ!!