ಬಂಟ್ವಾಳ: ಮೇ ಕೊನೆ ವಾರದಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಸಿದ್ಧವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಬಂಟ್ವಾಳ ಸರ್ಕಾರಿ ಆಸ್ಪತ್ರೆ ಭೇಟಿ ಸಂದರ್ಭ ಹೇಳಿದ್ದಾರೆ.
ಶಾಸಕ ರಾಜೇಶ್ ನಾಯ್ಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಜೊತೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ ಅವರು, ಆಸ್ಪತ್ರೆ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳದಲ್ಲಿ ಆಕ್ಸಿಜನ್ ಘಟಕ ನಿರ್ಮಾಣ ಆಗುತ್ತಿದೆ. ಆಸ್ಪತ್ರಯಲ್ಲಿ ಈಗ ಬೆಡ್ ಭರ್ತಿ ಆಗಿದ್ದರೂ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ 18 ಹಾಸಿಗೆಗಳು ಖಾಲಿ ಇವೆ ಎಂದವರು ಹೇಳಿದರು.ಮೂರನೇ ಅಲೆಗೆ ಹೋಗದ ರೀತಿಯಲ್ಲಿ ಕೋವಿಡ್ ನಿಯಂತ್ರಣ ಮಾಡಬೇಕಾಗಿದೆ. ಆಸ್ಪತ್ರೆಯಲ್ಲಿ ಸೌಲಭ್ಯ, ಸಿಬಂದಿ ಕೊರತೆ ಆಗದಂತೆ ಸ್ಥಳೀಯವಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. 12 ಕೋವಿಡ್ ಸೆಂಟರ್ ಗಳನ್ನು ತೆರೆಯಲಾಗಿದೆ ಎಂದು ಹೇಳಿದ ನಳಿನ್, ಅವಶ್ಯ ಇದ್ದಲ್ಲಿ ಹೆಚ್ಚು ತೆರೆಯಬಹುದು ಎಂದರು. ಬಂಟ್ವಾಳದಲ್ಲಿ ಕೊರೊನಾ ನಿಯಂತ್ರಣ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದ್ದು, ರೋಗಿಗಳ ಸಾಗಿಸುವ ನಿಟ್ಟಿನಲ್ಲಿ ತನ್ನ ಅನುದಾನದಿಂದ ಬಂಟ್ವಾಳಕ್ಕೆ ಆಕ್ಸಿಜನ್ ಸೌಲಭ್ಯವಿರುವ ಆ್ಯಂಬುಲೆನ್ಸ್ ಒದಗಿಸುವುದಾಗಿ ದ.ಕ.ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಕೋವಿಡ್ ನಿರ್ವಹಣೆಗಾಗಿ ದ.ಕ.ಜಿಲ್ಲೆಗೆ ರಾಜ್ಯದಿಂದ ಈಗಾಗಲೇ ೫೦ ಕೋ.ರೂ. ಅನುದಾನ ಬಂದಿದೆ. ಜತೆಗೆ ತನ್ನ ನಿಧಿಯಿಂದಲೂ ೨.೫ ಕೊ.ರೂ.ಗಳನ್ನು ನೀಡಿದ್ದೇನೆ. ಈ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಆಕ್ಸಿಜನ್ ಆ್ಯಂಬುಲೆನ್ಸ್ ಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಆ್ಯಂಬುಲೆನ್ಸ್ ಗಳನ್ನು ನೀಡಲಾಗುತ್ತದೆ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಕೊರೊನಾ ನಿಯಂತ್ರಣ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು, ಪ್ರತಿ ಗ್ರಾಮದಲ್ಲೂ ಸಭೆ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸದ್ಯಕ್ಕೆ ಇಲ್ಲಿನ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಜತೆಗೆ ಕೋವಿಡ್ ಕೇರ್ ಸೆಂಟರ್ ಗಳನ್ನು ಸಿದ್ಧಪಡಿಸಲಾಗಿದೆ . ಹೀಗಾಗಿ ಸದ್ಯಕ್ಕೆ ಬಂಟ್ವಾಳದಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದರು.
ಬಂಟ್ವಾಳ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯದ ಕುರಿತು ತೆಗೆದುಕೊಂಡ ಕ್ರಮಗಳನ್ನು ಶಾಸಕರು ವಿವರಿಸಿದರು. ಬಂಟ್ವಾಳ ತಾಲೂಕಿನಲ್ಲಿ ಕೊರೊನಾ ಸ್ಥಿತಿ ಗತಿ ಗಳ ಕುರಿತು ತಹಶೀಲ್ದಾರ್ ರಶ್ಮಿ ಎಸ್. ಆರ್. ತಿಳಿಸಿದರು. ಸರಕಾರಿ ಆಸ್ಪತ್ರೆಯ ವ್ಯವಸ್ಥೆಯನ್ನು ಆಡಳಿತ ವೈದ್ಯಾಧಿಕಾರಿ ಡಾ.ಪುಷ್ಪಲತಾ ವಿವರಿಸಿದರು. ಈ ಸಂದರ್ಭ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ಚಾಳ, ಬುಡ ಅಧ್ಯಕ್ಷ ದೇವದಾಸ ಶೆಟ್ಟಿ, ಡಿವೈಎಸ್ಪಿ ವೆಲಂಟೈನ್ ಡಿಸೋಜ, ಇನ್ಸ್ ಪೆಕ್ಟರ್ ಚೆಲುವರಾಜು, ಡಾ.ಪಾವನಾ, ಡಾ.ಕಿಶೋರ್ ಕುಮಾರ್, ಡಾ.ಸೌಮ್ಯ, ಡಾ.ಚೇತನ್ ರಾಜ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು ಮತ್ತಿತರರು ಉಪಸ್ಥಿತರಿದ್ದರು.