ಬಂಟ್ವಾಳ: ಕೋವಿಡ್ ಟೆಸ್ಟ್, ಲಸಿಕೆ, ನಿಯಮಾವಳಿ ಪಾಲನೆ ಇವುಗಳಿಗೆ ಸಂಬಂಧಿಸಿ ಯಾವುದೇ ವಶೀಲಿ ಮಾಡಲು ಬರಬೇಡಿ, ಎಲ್ಲರ ಆರೋಗ್ಯವೇ ಮೊದಲ ಆದ್ಯತೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಅರಳ ಗ್ರಾಪಂ ಟಾಸ್ಕ್ ಫೋರ್ಸ್ ಸಭೆಯಲ್ಲಿ ಹೇಳಿದ್ದಾರೆ.
ಗ್ರಾಪಂನಲ್ಲಿ ಎರಡು ಸಕ್ರಿಯ ಪ್ರಕರಣಗಳಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಮತ್ತೊಬ್ಬರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ನಿಯಂತ್ರಣದಲ್ಲಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ಮುಕ್ತ ಗ್ರಾಮವನ್ನಾಗಿಸಲು ಪಣ ತೊಡಿ ಎಂದು ಟಾಸ್ಕ್ ಫೋರ್ಸ್ ಸದಸ್ಯರಿಗೆ ಶಾಸಕರು ಕಿವಿಮಾತು ಹೇಳಿದರು.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್ ಮಾತನಾಡಿ, ರಾಜ್ಯದಲ್ಲೇ ಲಸಿಕೆ ಕೊರತೆ ಇರುವ ಕಾರಣ ಯಾರೂ ಆತಂಕಪಡಬೇಡಿ, ಎಲ್ಲರಿಗೂ ಲಸಿಕೆ ದೊರಕುತ್ತದೆ ಎಂದರು. ತಾ.ಪಂ.ಇ.ಒ.ರಾಜಣ್ಣ ಮಾತನಾಡಿ, ಟಾಸ್ಕ್ ಫೋರ್ಸ್ ಸಮಿತಿ ಗ್ರಾಮದಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆಯಾಗದಂತೆ ನಿಗಾವಹಿಸಬೇಕು, ಕೊರೋನಾ ವಾರಿಯರ್ಸ್ ಗಳಿಗೆ ಅಗತ್ಯವಾದ ಮಾಸ್ಕ್, ಕೊಡೆ, ಸ್ಯಾನಿಟೇಸರ್ ಅನ್ನು ಪಂ.ಅನುದಾನದಿಂದ ಒದಗಿಸಿ ಪ್ರೋತ್ಸಾಹಿಸಬೇಕು ಎಂದರು.
ಅರಳ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಮೀಧರ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಬಂಟ್ವಾಳ ಸಿ.ಡಿ.ಪಿ.ಒ. ಗಾಯತ್ರಿ ಕಂಬಳಿ , ಅರಳ ಗ್ರಾ .ಪಂ.ಪಿ.ಡಿ.ಒ ಧರ್ಮರಾಜ್ ಪಿ, ಗ್ರಾಮ ಕರಣೀಕ ಅಮೃತಾಂಶು, ಬಂಟ್ವಾಳ ಶಾಸಕರ ವಾರ್ ರೂಂ ಪ್ರಮುಖರಾದ ದೇವಪ್ಪ ಪೂಜಾರಿ ಬಾಳಿಕೆ, ಡೊಂಬಯ್ಯ ಅರಳ, ರಮನಾಥ ರಾಯಿ, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರುಗಳು ಹಾಗೂ ಅಧಿಕಾರಿ ವರ್ಗ ಉಪಸ್ಥಿತರಿದ್ದರು.