ಬಂಟ್ವಾಳ: ಬಂಟ್ವಾಳದ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರಿನಿಂದ ಆಗಮಿಸುವ ಪ್ರಯಾಣಿಕರ ವಿವರಗಳನ್ನು ಸಂಗ್ರಹಿಸುವ ಕಾರ್ಯ ಆರಂಭವಾಗಿದೆ. ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿದ್ದು, ಆ ಪ್ರದೇಶಗಳಿಗೆ ಬೆಂಗಳೂರಿನಿಂದ ದಿನಕ್ಕೆ ಸುಮಾರು ಅರವತ್ತಕ್ಕೂ ಅಧಿಕ ಮಂದಿ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಾರೆ. ಇವರ ವಿವರಗಳನ್ನು ಸಂಗ್ರಹಿಸುವ ಕಾರ್ಯ ನಡೆಯುತ್ತಿದ್ದು, ದೂರವಾಣಿ ಸಂಖ್ಯೆ, ವಿಳಾಸವನ್ನು ಆಯಾ ಗ್ರಾಮದ ಪಿಡಿಒಗಳಿಗೆ ಒದಗಿಸಲಾಗುತ್ತಿದ್ದು, ಕ್ವಾರಂಟೈನ್ ನಲ್ಲಿ ಇರಿಸುವಂತೆ ಸೂಚಿಸಲಾಗುತ್ತಿದೆ ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಮಾಹಿತಿ ನೀಡಿದ್ದಾರೆ.