ಬಂಟ್ವಾಳ: ರಾಯಿ ಗ್ರಾಪಂನಲ್ಲಿ 60 ವರ್ಷಕ್ಕೆ ಮೇಲ್ಪಟ್ಟವರ ಲಸಿಕಾಕರಣಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಅಭಿನಂದನೀಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ದಾರೆ.
ಬಂಟ್ವಾಳ ತಾಲೂಕಿನ ರಾಯಿ ಗ್ರಾಪಂನಲ್ಲಿ ಕೊರೊನಾ ಕಾರ್ಯಪಡೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದಾಗ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ, 60 ವರ್ಷಕ್ಕೆ ಮೇಲ್ಪಟ್ಟ 269 ಮಂದಿಯಲ್ಲಿ 256 ಮಂದಿಗೆ ಲಸಿಕೆ ಹಾಕಿರುವ 45ಕ್ಕಿಂತ ಮೇಲ್ಪಟ್ಟು 60ರ ಒಳಗಿನ 1006 ಮಂದಿಯಲ್ಲಿ 275 ಮಂದಿಗೆ ಲಸಿಕೆ ಹಾಕಲಾಗಿದೆ ಎಂಬ ವಿಚಾರವನ್ನು ತಿಳಿಸಿದರು. ರಾಯಿಯಲ್ಲಿ 37 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 10 ಮಂದಿ ಗುಣಮುಖರಾಗಿದ್ದಾರೆ. ಪ್ರಕರಣಗಳು ಬಾರದಂತೆ ಹಾಗೂ ಸಾವು ಸಂಭವಿಸದಂತೆ ಜಾಗರೂಕತೆಯಿಂದ ಕೆಲಸ ಮಾಡಿರಿ ಎಂದು ಶಾಸಕರು ತಿಳಿಸಿದರು.
ಖಾಸಗಿ ವೈದ್ಯರು ಕೋವಿಡ್ ಲಕ್ಷಣಗಳಿರುವ ರೋಗಿಗಳನ್ನು ಕಂಡರೆ ಕೂಡಲೇ ಟಾಸ್ಕ್ ಫೋರ್ಸ್ ಗೆ ತಿಳಿಸುವಂತೆ ಅವರು ಮನವಿ ಮಾಡಿದರು. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೊಂಕಿತರು ತಿರುಗಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದರೆ ಅಂತಹವರ ಮೇಲೆ ಕಾನೂನು ಕ್ರಮಕೊಳ್ಳಲಾಗುತ್ತದೆ ಎಂದು ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್. ಹೇಳಿದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ಅಧ್ಯಕ್ಷೆ ಸಭೆಗೆ ಗೈರುಹಾಜರಾಗಿದ್ದರು. ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಬುಡ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್ ಆರ್, ತಾ.ಪಂ.ಇ.ಒ.ರಾಜಣ್ಣ, ಕಂದಾಯ ನಿರೀಕ್ಷಕ ನವೀನ್ ಬೆಂಜನಪದವು, ಪಿ.ಡಿ.ಒ.ಮಧು, ಪ್ರಮುಖರಾದ ರಮನಾಥ ರಾಯಿ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.