ನಿಯಮ ಪಾಲನೆಗೆ ಕಟ್ಟುನಿಟ್ಟಿನ ಕ್ರಮ – ಅಧಿಕಾರಿಗಳಿಗೆ ಸೂಚನೆ
ಬಂಟ್ವಾಳ: ತಾಲೂಕಿನಲ್ಲಿ ಎಲ್ಲ ವ್ಯವಸ್ಥೆಗಳೂ ಇವೆ, ಕೊರೊನಾ ನಿಯಂತ್ರಣಕ್ಕೆ ಇರುವ ಟಫ್ ರೂಲ್ಸ್ ಅನ್ನು ಅನುಷ್ಠಾನಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿರುವ ಶಾಸಕ ರಾಜೇಶ್ ನಾಯ್ಕ್, ಸಮಸ್ಯೆಗಳಿದ್ದರೆ ಕೂಡಲೇ ಸಹಾಯವಾಣಿ ಗಮನಕ್ಕೆ ತನ್ನಿ ಎಂದು ಜನತೆಗೆ ಮನವಿ ಮಾಡಿದ್ದಾರೆ.
ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಬಂಟ್ವಾಳದ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಶಾಸಕ ರಾಜೇಶ್ ನಾಯ್ಕ್ ಅಧ್ಯಕ್ಷತೆಯಲ್ಲಿ ಶಾಸಕರ ಕಚೇರಿಯಲ್ಲಿ ಶನಿವಾರ ನಡೆಯಿತು.
ಕೊರೊನಾ ಸೋಂಕು ಹರಡದಂತೆ ಸರ್ಕಾರ ವಿಧಿಸಿರುವ ಕರ್ಫ್ಯೂ ಸಹಿತ ಪ್ರತಿಬಂಧಕ ಕ್ರಮಗಳ ಕಟ್ಟುನಿಟ್ಟಿನ ಅನುಷ್ಠಾನವಾಗಬೇಕು ಎಂದ ಶಾಸಕರು, ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಪ್ರತಿಯೊಂದು ಮಾಹಿತಿಯನ್ನೂ ಒದಗಿಸುವಂತೆ ಸೂಚಿಸಿದರು. ಬೆಡ್, ಆಕ್ಸಿಜನ್ ಅಥವಾ ಆಸ್ಪತ್ರೆಗೆ ಯಾರನ್ನಾದರೂ ಸೇರಿಸುವ ವಿಚಾರದಲ್ಲಿ ತೊಂದರೆ, ಸಮಸ್ಯೆಗಳುಂಟಾದಲ್ಲಿ ತನಗೆ ಅಥವಾ ಕಾರ್ಯಪಡೆಗೆ ತಕ್ಷಣ ಮಾಹಿತಿ ಒದಗಿಸಿ, ದಿನದ ಇಪ್ಪತ್ತನಾಲ್ಕು ತಾಸೂ ತಾನು ಹಾಗೂ ತನ್ನ ಕಚೇರಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಆದಾಗ್ಯೂ ಜನರಿಗೆ ಭಯಹುಟ್ಟಿಸುವ ರೀತಿಯ ಅಪಪ್ರಚಾರಗಳಿಗೆ ಕಡಿವಾಣ ಹಾಕಬೇಕು, ಈ ಸಂದರ್ಭ ಯಾವುದೇ ಸಮಸ್ಯೆಗಳಿದ್ದರೆ ಅದನ್ನು ಬಗೆಹರಿಸುವ ಕಾರ್ಯ ಮಾಡಬೇಕು ಈ ಕುರಿತು ವಿಶೇಷ ತಂಡ ರಚಸಿ ಎಂದು ಸೂಚಿಸಿದರು.
ವಿನಾಕಾರಣ ಹೊರಗೆ ತಿರುಗುವವರಿಗೆ ಕೇಸ್ ಬುಕ್ ಮಾಡಿ, ಬೀಟ್ ಪೊಲೀಸರು ನಿಗಾ ವಹಿಸಬೇಕು, ಹೈವೇ ಪಾಟ್ರೋಲ್ ವಾಹನ ಗಸ್ತು ಹೆಚ್ಚಿಸಿ ಎಂದು ಅವರು ಪೋಲೀಸ್ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು. ಕೊರೊನಾ ವಿರುದ್ದದ ಹೋರಾಟದಲ್ಲಿ ಯಾರು ವಿರೋಧ ಮಾಡಿದರೂ ಅಡ್ಡ ಬಂದರೂ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮಕೈಗೊಳ್ಳಿ ಎಂದ ಶಾಸಕರು,. ಅಧಿಕಾರಿಗಳು ಮತ್ತು ಟಾಸ್ಕ್ ಫೋರ್ಸ್ ಸಮಿತಿ ಜೊತೆಯಾಗಿ ಕೆಲಸ ಮಾಡಿದರೆ ಗ್ರಾಮ ಮಟ್ಟದಲ್ಲಿ ಕೊರೊನ ನಿಯಂತ್ರಣ ಸಾಧಿಸಲು ಸಾಧ್ಯವಾಗಬಹುದು ಎಂದರು.
ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದ ಜೊತೆಯಲ್ಲಿ ವಾಮದಪದವು ಆಸ್ಪತ್ರೆಯಲ್ಲಿಯೂ ಕೋವಿಡ್ ರೋಗಿಗಳಿಗೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಾಗಿ ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಕಲ್ಲಡ್ಕ ದಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಲಾಗುತ್ತದೆ ಈ ಹಿನ್ನೆಲೆಯಲ್ಲಿ ಯಾವುದೇ ಆತಂಕ ಬೇಡ ಎಂದು ಶಾಸಕರು ಹೇಳಿದರು.
ಡಿವೈಎಸ್ಪಿ ವೆಲಂಟೈನ್ ಡಿಸೋಜ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ತಹಸೀಲ್ದಾರ್ ರಶ್ಮಿ ಎಸ್.ಆರ್, ಇಒ ರಾಜಣ್ಣ, ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.