ಬಂಟ್ವಾಳ

ಗ್ರಾಮಮಟ್ಟದಲ್ಲಿ ಮೆಡಿಕಲ್ ಕಿಟ್ ಒದಗಿಸಿ, ಎಲ್ಲರೂ ಲಸಿಕೆ ಪಡೆದುಕೊಳ್ಳಿ: ಕಾರ್ಯಪಡೆ ಸಭೆಯಲ್ಲಿ ಶಾಸಕ ಯು.ಟಿ.ಖಾದರ್

ಬಂಟ್ವಾಳ: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಬಂಟ್ವಾಳ ತಾಲೂಕಿಗೊಳಪಟ್ಟ ತನ್ನ ಕ್ಷೇತ್ರದ ಗ್ರಾಮಗಳ ಕಾರ್ಯಪಡೆಗಳ ಸಭೆಯನ್ನು ಶನಿವಾರ ಬಂಟ್ವಾಳ ತಾಪಂ ಸಭಾಂಗಣದಲ್ಲಿ ನಡೆಸಿದರು.

ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಸಹಾಯಕ ಕಮೀಷನರ್ ಮದನ್ ಮೋಹನ್, ತಾಪಂ ಇಒ ರಾಜಣ್ಣ, ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಬಿಇಒ ಜ್ಞಾನೇಶ್, ಎಸ್ಸೈ ಪ್ರಸನ್ನ, ಬಾಳೆಪುಣಿ, ಪುದು, ತುಂಬೆ, ಇರಾ, ಕುರ್ನಾಡು, ಸಜಿಪಪಡು, ಸಜಿಪನಡು, ಮೇರಮಜಲು, ನರಿಂಗಾನ, ಪಜೀರು ಗ್ರಾಪಂಗಳ ಕಾರ್ಯಪಡೆಯ ಸದಸ್ಯರಾದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಹಿರಿಯ, ಕಿರಿಯ ಆರೋಗ್ಯ ಸಹಾಯಕಿಯರು, ಕೆಲ ಗ್ರಾಪಂ ಸದಸ್ಯರು, ಕಳೆದ ಜಿಪಂನ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಮಮತಾ ಗಟ್ಟಿ, ತಾಪಂ ಸದಸ್ಯ ಹೈದರ್ ಕೈರಂಗಳ, ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಶಾಸಕರು, ಕೊರೊನಾದಿಂದ ಯಾವುದೇ ಗ್ರಾಮದಲ್ಲೂ ಸಾವು ಸಂಭವಿಸದಂತೆ ಗರಿಷ್ಠ ಪ್ರಯತ್ನ ಮಾಡೋಣ. ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ಪಂಚಾಯಿತಿ ಮಟ್ಟದಲ್ಲಿ ಮೆಡಿಕಲ್ ಕಿಟ್ ಅನ್ನು ಟಾಸ್ಕ್ ಫೋರ್ಸ್ ಮುಖಾಂತರ ಮಾಡಿರಿ. ಸೋಂಕಿತರ ಪ್ರಾಥಮಿಕ ಸಂಪರ್ಕಗಳ ಗುರುತು ಪತ್ತೆ ಮಾಡುವಲ್ಲಿ ಹಿನ್ನಡೆಯಾಗದಂತೆ ನೋಡಿಕೊಳ್ಳಿ. ಅನಾವಶ್ಯಕವಾಗಿ ಮನೆಯಿಂದ ಹೊರಕ್ಕೆ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ಟಾಸ್ಕ್ ಫೋರ್ಸ್ ಗಿದೆ. ಇನ್ನು ಥಿಯರಿ ಸಾಕು, ಪ್ರಾಕ್ಟಿಕಲ್ ಆಗಿ ಕೆಲಸ ಮಾಡಿರಿ ಎಂದರು. ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವುದು, ಅಲ್ಲಿ ಔಷಧೋಪಚಾರಗಳು ಸರಿಯಾಗಿ ದೊರಕುವಂತೆ ಮಾಡುವುದು ಹಾಗೂ ಸೋಂಕಿತರ ಮನೆಮಂದಿಯ ಹಾಗೂ ಪ್ರಾಥಮಿಕ ಸಂಪರ್ಕ ಬಂದವರ ಟೆಸ್ಟ್ ಮಾಡಿಸಿ, ಆ ಮನೆಗಳಿಗೆ ಅಗತ್ಯವಿದ್ದ ಪಕ್ಷದಲ್ಲಿ ಆಹಾರ ಸಹಿತ ಅಗತ್ಯವಸ್ತುಗಳ ಸರಬರಾಜು ಮಾಡುವ ಕುರಿತು ತಳಮಟ್ಟದಲ್ಲಿ ಎಲ್ಲರೂ ಒಮ್ಮತದಿಂದ ಕೆಲಸ ಮಾಡಬೇಕು ಎಂದರು. ಕೊರೊನಾ ಯಾವ ಗ್ರಾಮವನ್ನೂ ಬಿಡುವುದಿಲ್ಲ. ಇಲ್ಲಿ ಬಾರದು, ಬಂದಾಗ ನೋಡೋಣ ಎಂಬ ನಿರ್ಲಕ್ಷ್ಯ ಬೇಡ. ತಂಡವಾಗಿ ಕೆಲಸ ಮಾಡಬೇಕು. ಕೋವಿಡ್ ಕೇರ್ ಸೆಂಟರ್ ನ ಬಳಕೆ ಮಾಡಿರಿ ಎಂದರು.

ಜನರಿಗೆ ಬೇಕಾಗಿ ಈ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಭಾವನೆ ಮೂಡಿಸಬೇಕು ಎಂದ ಖಾದರ್, ಯುವಜನರು ನನಗೆ ಏನೂ ಆಗುವುದಿಲ್ಲ ಎಂದು ಭಾವಿಸುವುದು ಬೇಡ. ಸಣ್ಣ ಸಮಸ್ಯೆ ಇದ್ದರೂ ಪರೀಕ್ಷೆ ಮಾಡಿಸಿಕೊಳ್ಳಿ ಎಂದ ಖಾದರ್, ಪಂಚಾಯತ್ ನಲ್ಲಿ ಮೆಡಿಕಲ್ ಕಿಟ್ ಮಾಡಿರಿ, ಟಾಸ್ಕ್ ಫೋರ್ಸ್ ಸದಸ್ಯರು ಇದರ ಕುರಿತು ಗಮನ ಹರಿಸಿ. ಕೊರೊನಾ ಸ್ವಭಾವ ಬದಲಾಯಿಸಿಲ್ಲ. ವೆಂಟಿಲೇಟರ್ ಹಂತದವರೆಗೆ ಹೋಗಬೇಡಿ. ಕೋವಿಡ್ ನಿಂದ ಯಾರೂ ಸಾಯಬಾರದು. ಮುಂಜಾಗರೂಕತೆ ವಹಿಸಬೇಕು ಎಂದರು. ಸಹಾಯಕ ಕಮೀಷನರ್ ಮದನ್ ಮೋಹನ್ ಮಾತನಾಡಿ, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಕೊರೊನಾ ಈಗ ಮಂಗಳೂರು ಸಿಟಿಯಲ್ಲಿ ನಿಯಂತ್ರಣದಲ್ಲಿದೆ ಗ್ರಾಪಂ ಟಾಸ್ಕ್ ಫೋರ್ಸ್ ಸಕ್ರಿಯವಾಗಬೇಕು. ಗ್ರಾಮಗಳಿಂದ ನಿಯಂತ್ರಣ ಆಗದಿದ್ದರೆ ಮತ್ತೆ ಸಮಸ್ಯೆ ಆಗುತ್ತದೆ ಎಂದರು.

ಗ್ರಾಪಂ ಅಧ್ಯಕ್ಷರುಗಳಾದ ರಮ್ಲಾನ್ ಮಾರಿಪಳ್ಳ, ಪ್ರವೀಣ್ ತುಂಬೆ, ಇರಾ ಗ್ರಾಪಂ ಮಾಜಿ ಅಧ್ಯಕ್ಷ ರಝಾಕ್ ಕುಕ್ಕಾಜೆ, ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ, ಪ್ರಮುಖರಾದ ಅಬುಬಕ್ಕರ್ ಸಜಿಪ ಮೊದಲಾದವರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ