ಕಳೆದ ವರ್ಷ ಇದೇ ಹೊತ್ತಿನಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕೊರೊನಾ ಸಾಕಷ್ಟು ಭೀತಿ ಉಂಟು ಮಾಡಿತ್ತು. ಈಗ ಎರಡನೇ ಅಲೆ ಎದ್ದಿದೆ. ಇದನ್ನು ಮಟ್ಟ ಹಾಕಲು ಕೇವಲ ಆಡಳಿತ ಒಂದೇ ಸಾಕಾಗುವುದಿಲ್ಲ, ಜನರಿಗೆ ಅರಿವೂ ಅತಿ ಮುಖ್ಯ. ಈ ನಿಟ್ಟಿನಲ್ಲಿ ಬಂಟ್ವಾಳ ಪುರಸಭೆ ಏನು ಕ್ರಮಗಳನ್ನು ಕೈಗೊಂಡಿದೆ?
ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಈ ಕುರಿತು ಪ್ರತಿಕ್ರಿಯಿಸಿ, ಪುರಸಭೆ ವ್ಯಾಪ್ತಿಯಲ್ಲಿ 43 ಸಾವಿರ ಜನರು ವಾಸಿಸುತ್ತಿದ್ದು, 12,906 ಮನೆಗಳಿವೆ. ಇಷ್ಟು ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ. ಸೋಮವಾರ 117 ಮಂದಿ ಸೋಂಕಿತರು ಇದ್ದು, ಬಹುತೇಕ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಮನೆಗಳ ಕುರಿತು ಆರೋಗ್ಯ ಇಲಾಖೆಯೊಂದಿಗೆ ಪುರಸಭೆಯೂ ನಿಗಾ ವಹಿಸಿದೆ.
ಮನೆಗಳಲ್ಲಿ ವಾಸಿಸುವವರೆಲ್ಲರೂ ಕೋವಿಡ್ ಸೋಂಕಿತರು ಎಂದಾದಲ್ಲಿ ಅವರಿಗೆ ಅಗತ್ಯ ವಸ್ತುಗಳನ್ನು ಒದಗಿಸಲು ನೆರವಾಗುವುದು, ಸೋಂಕಿತರ ಮನೆಗಳಿಂದ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವಾಹನ ವ್ಯವಸ್ಥೆ, ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸಿಕೊಂಡು ನಡೆಸಲಾಗುತ್ತಿದೆ. ಇಷ್ಟೇ ಅಲ್ಲದೆ, ಪುರಸಭೆ ವ್ಯಾಪ್ತಿಯ ಎಲ್ಲ 27 ವಾರ್ಡುಗಳಲ್ಲಿ ಈ ಹಿಂದೆ ಆಡಳಿತಾಧಿಕಾರಿ ಇದ್ದಾಗ ಮಾಡಿದ್ದ ವಾರ್ಡ್ ಸಮಿತಿಗಳನ್ನು ಮತ್ತೆ ಸಕ್ರಿಯಗೊಳಿಸಲಾಗುವುದು. ಎಲ್ಲ ಪುರಸಭಾ ಸದಸ್ಯರು ತಮ್ಮ ವಾರ್ಡು ಗಳ ಸಮಿತಿಯ ಅಧ್ಯಕ್ಷರಾಗಿದ್ದು, ಅವರೆಲ್ಲರೂ ಸಮರೋಪಾದಿಯಲ್ಲಿ ವಾರ್ಡ್ ಸಮಿತಿಯನ್ನು ನಿರ್ವಹಿಸುವ ಮೂಲಕ ಸಂಕಷ್ಟದ ಸಮಯದಲ್ಲಿ ಜತೆಯಾಗುತ್ತಾರೆ ಎಂಬ ವಿಶ್ವಾಸ ತನಗಿದೆ ಎಂದು ಶರೀಫ್ ಹೇಳಿದರು.
ಕಸ ಸಂಗ್ರಹದ ವಾಹನಗಳಲ್ಲಿಯೂ ಕೋವಿಡ್ ಕುರಿತ ಜಾಗೃತಿ ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ. ಮಾಸ್ಕ್ ಧರಿಸುವುದು, ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತು ಸಿಬ್ಬಂದಿ ಸಹಿತ ಸಾರ್ವಜನಿಕರಿಗೂ ಸ್ಪಷ್ಟ ಸೂಚನೆ ನೀಡಲಾಗುತ್ತಿದೆ ಎಂದು ಇದೇ ವೇಳೇ ಆರೋಗ್ಯಾಧಿಕಾರಿ ಜಯಶಂಕರ್ ಹೇಳಿದರು.
ಈಗಾಗಲೇ ೧೪ ವಾರ್ಡುಗಳಲ್ಲಿ ಲಸಿಕಾ ಕಾರ್ಯಕ್ರಮ ಆಗಿದೆ. ಅದರ ಕುರಿತೂ ಪ್ರತ್ಯೇಕವಾಗಿ ಧ್ವನಿವರ್ಧಕ ಪ್ರಚಾರ ಮಾಡಲಾಗುತ್ತಿದೆ. ಲಸಿಕೆಗಳು ಲಭ್ಯವಾಗಲು ಆರಂಭವಾದೊಡನೆ ಎಲ್ಲ ೨೭ ವಾರ್ಡುಗಳಲ್ಲಿ ಲಸಿಕಾ ಶಿಬಿರ ಸಹಿತ ಕೋವಿಡ್ ಜಾಗೃತಿ ಕಾರ್ಯಗಳನ್ನು ಆಯಾ ಪುರಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ನಿರ್ವಹಿಸಲಾಗುತ್ತದೆ ಎಂದು ಶರೀಫ್ ಹೇಳಿದರು.
ಕೊರೊನಾ ಸೋಂಕು ಹೆಚ್ಚಳವಿರುವ ಪ್ರದೇಶಗಳಲ್ಲಿ ಸಾರ್ವಜನಿಕ ಜಾಗಗಳಲ್ಲಿ ಸ್ಯಾನಿಟೈಸ್ ಮಾಡುವುದು, ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಸುವುದನ್ನು ಹಾಗೂ ಜಾಗೃತಿಯ ಕರಪತ್ರಗಳನ್ನು ವಿತರಿಸಲಾಗುತ್ತಿದೆ ಎಂದವರು ತಿಳಿಸಿದರು.