ನಿಮ್ಮ ಧ್ವನಿ

ಬೋರ್ ವೆಲ್ ಕೊರೆಯುವ ಮೊದಲು ಹತ್ತಾರು ಬಾರಿ ಯೋಚಿಸಿ… ಏಕೆಂದರೆ,,,

  • ನಿತೇಶ ಕೆ.
pic: internet

ಏಪ್ರಿಲ್ ಮೇ ತಿಂಗಳು ಬಂತೆಂದರೆ, ಕರಾವಳಿಯಲ್ಲಿ ಬೋರ್ ವೆಲ್ ಆರ್ಭಟ ಜೋರಾಗಿಯೇ ಇರುತ್ತದೆ. ನೀರಿಗಾಗಿ ಎಲ್ಲೆಡೆ ಹಾಹಾ ಕಾರ ಕೇಳಿ ಬರುತ್ತದೆ. ಇದಕ್ಕೆ ಮುಂದಾಲೋಚನೆ ಮಾಡದೆ ಹೊಳೆಯುವುದು ಬೋರ್ ವೆಲ್. ಬೋರ್ ವೆಲ್ ನಿಂದ ಮುಂದಾಗುವ ಅನಾಹುತಗಳನ್ನು ಯಾರೂ ಯೋಚಿಸಿಲ್ಲ ಸರ್ಕಾರ ಕೂಡ.

ದಕ್ಷಿಣ ಕನ್ನಡ ಉಡುಪಿ ಸೇರಿ ನಮ್ಮಲ್ಲಿ ಒಟ್ಟು 13 ನದಿಗಳಿವೆ. ಹಾಗಿದ್ದರೂ ನಮ್ಮ ಅಂತರ್ಜಲ ಕುಸಿಯಲು ಕಾರಣ ಏನು? ನಮ್ಮಲ್ಲಿ ನೀರಾವರಿ ಯೋಜನೆ ಅವೈಜ್ಞಾನಿಕವಾಗಿದೆ. ಸುಮಾರು 25 ವರ್ಷಗಳ ಹಿಂದೆ ಹೋದರೆ ನಮ್ಮಲ್ಲಿ ಗದ್ದೆ ಬದಿಯಲ್ಲಿ ತೋಡುಗಳಿದ್ದವು. ಅಲ್ಲಲ್ಲಿ ಅದಕ್ಕೆ ಕಟ್ಟೆ ನಿರ್ಮಿಸಲಾಗುತಿತ್ತು. ಇದರಿಂದ ಅಂತರ್ಜಲ ಯಥೇಚ್ಛವಾಗಿ ತುಂಬುತಿತ್ತು. ಎಂದೂ ಬತ್ತದ ಬಾವಿಗಳಿದ್ದವು. ಈಗ? ರೈತರು ಬತ್ತ ಕೃಷಿ ಮರೆತ ಮೇಲೆ ಸ್ಥಳೀಯ ಪಂಚಾಯತುಗಳೂ ಅಂತರ್ಜಲ ಮಟ್ಟ ಹೆಚ್ಚಿಸುವ ಬಗ್ಗೆ ಯೋಚಿಸಿಲ್ಲ. ನೀರಿಲ್ಲವೇ? ಬೋರ್ ಹಾಕಲು ಹೊರಟು ಬಿಡುತ್ತವೆ. ಬೋರ್ ಹಾಕಿದ ಮೇಲೆ ಅದನ್ನು ರೀಚಾರ್ಜ್ ಮಾಡುವ ಬಗ್ಗೆ ಯಾವ ಪಂಚಾಯತೂ ಯೋಚನೆ ಮಾಡಲ್ಲ. ನೀರು ಕಮ್ಮಿ ಆದಾಗ ಅವೈಜ್ಞಾನಿಕವಾಗಿ ಮತ್ತೆ ಆಳ ಕೊರೆಯಲು ಶುರು ಮಾಡ್ತಾರೆ. ಹಲವು ಕಡೆ ಈ ಸಾರ್ವಜನಿಕ ಕುಡಿಯುವ ನೀರಿನ ಬೋರ್ ವೆಲ್ ಗಳು 24 ಗಂಟೆ ರನ್ ಆಗುತ್ತವೆ. ಇಷ್ಟು ಜೋರಾಗಿ ನೀರು ಖಾಲಿ ಮಾಡಿದರೆ ಪಕ್ಕದಲ್ಲಿ ಇರುವ ಕೃಷಿಕರ ಪಾಡೇನು? ಬಾವಿ ನೀರು ನಂಬಿದವರ ಕಥೆ? ಸಾರ್ವಜನಿಕರಿಗೆ ಕುಡಿಯುವ ನೀರಿನ ಬಗ್ಗೆ ಯೋಚನೆ ಮಾಡುವ ಗ್ರಾಮ ಪಂಚಾಯತ್ ಗಳು ಅಂತರ್ಜಲ ಮಟ್ಟದ ಬಗ್ಗೆ ತಲೆನೇ ಕೆಡಿಸಿಕೊಂಡಿಲ್ಲ. ಪೇಪರ್ ನಲ್ಲಿ ಬೋರ್ ವೆಲ್ ರೀಚಾರ್ಜ್ ಮಾಡಿ ಎಂದು ಜಾಹೀರಾತು ಹಾಕ್ತಾರೆ ಹೊರತು ಖುದ್ದು ಸರ್ಕಾರಿ ಬೋರ್ ವೆಲ್ ಗೆ ಅಳವಡಿಸಿಲ್ಲ. ಒಂದು ಕಡೆ ಸರ್ಕಾರಿ ಬೋರ್ ವೆಲ್ ಹಾಕಿದರೆ ಅದರ ಸುತ್ತ 500 ಮೀಟರ್ ಸುತ್ತಳತೆಯಲ್ಲಿ ಯಾರೂ ಬೋರ್ ಹಾಕಬಾರದು ಅಂತ ತಾಕೀತು ಮಾಡ್ತಾರೆ. ಸ್ವಂತ ಜಮೀನು ಇಟ್ಟುಕೊಂಡು ಬಾವಿ ನೀರು ನಂಬಿ ಕೃಷಿ ಮಾಡುವವನು ಇವರ ಬೋರ್ ಬಂದ ಮೇಲೆ ಬಾವಿ ನೀರೂ ಇಲ್ಲದೆ ಸೈಟ್ ಮಾಡಿ ಮಾರಬೇಕಷ್ಟೆ. ಒಬ್ಬ ಕೃಷಿಕ ಅಥವಾ ಸ್ವಂತ ಮನೆ ಇರುವವನು ತನ್ನ ಜಾಗದಲ್ಲಿ ಬೋರ್ ಹಾಕಿಕೊಂಡರೆ ಅವನ ಜಾಗಕ್ಕೆ ಉಪಯೋಗಿಸಿ ನೀರೆಲ್ಲಾ ಮತ್ತೆ ಭೂಮಿ ಸೇರುತ್ತೆ. ಹಾಗೆ ನೋಡಿದರೆ ಸರ್ಕಾರಿ ಬೋರೆವೆಲ್ ಅಂತರ್ಜಲಕ್ಕೆ ಭಾರೀ ಅಪಾಯಕಾರಿ. ದಿನದ 24 ಗಂಟೆ ನೀರು ಎಳೆಯುವುದಲ್ಲದೆ ಆ ನೀರನ್ನು ಅದೆಲ್ಲೋ ಹರಿಸಿ ಅಂತರ್ಜಲ ಬರಿದು ಮಾಡೋಕೆ ಕಾರಣ ಆಗ್ತಾರೆ. ಕುಡಿಯುವ ನೀರು ಕೊಡೋದು ಸರ್ಕಾರದ ಹಕ್ಕು ಹಾಗಂತ ಪರಿಸರದ ಬಗ್ಗೆನೂ ಕಾಳಜಿ ವಹಿಸಬೇಕು. ಮೇಲ್ ಒರತೆ ಇಂಗಿಸಿ ಅಲ್ಲಿರುವ ಬಾವಿ ಕೆರೆ ತೋಡು ಹಾಳು ಮಾಡಿದರೆ ದೇವರು ಮೆಚ್ಚುತ್ತಾನೆಯೇ?

ಈ ಬಗ್ಗೆ ಗ್ರಾಮ ಪಂಚಾಯತ್ ಗಳು ವಿವೇಚನೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ವೋಟ್ ಗಾಗಿ ಸಿಕ್ಕ ಸಿಕ್ಕಲ್ಲಿ ಬೋರ್ ಹಾಕಿ ಜನರ ತೆರಿಗೆ ಹಣ ಬಳಸಿ ಜನರನ್ನು ಯಾಮಾರಿಸುವ ಬದಲು ದೂರದೃಷ್ಟಿ ಯಿಂದ ಆಲೋಚಿಸಬೇಕು. ಅಂತರ್ಜಲ ಭದ್ರತೆ, ಕೆರೆ ಬಾವಿ ರಕ್ಷಣೆ, ಪರಿಸರ ಜೀವಿಗಳ ರಕ್ಷಣೆ, ಒಣಗಿ ಹೋಗಿರುವ ತೋಡುಗಳನ್ನು ಮತ್ತೆ ನೀರು ಹರಿಸುವ ಮೂಲವಾಗಿ ಮಾಡಿದರೆ ನೀರಿಗೆ ಎಲ್ಲೂ ಕೊರತೆ ಬರಲ್ಲ. ಪ್ರತಿಯೊಬ್ಬ ಪಂಚಾಯ್ತಿ ಸದಸ್ಯನೂ ತನ್ನ ಮನೆಯಲ್ಲಿರುವ ಮಗುವಿಗೆ ಜೀವನದುದ್ದಕ್ಕೂ ಸ್ವಚ್ಛ ಕುಡಿಯುವ ನೀರು, ಉಸಿರಾಡೋಕೆ ಸ್ವಚ್ಛ ಗಾಳಿ, ಸುಂದರ ಪರಿಸರ ಕೊಡುವ ಕನಸು ಕಂಡರೆ ನೆಮ್ಮದಿಯ ಜೀವನ ನಮ್ಮದಾಗುತ್ತೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts