ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕೋವಿಡ್ ಎರಡನೇ ಅಲೆ ಗಂಭೀರಾವಸ್ಥೆ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ಬಂಟ್ವಾಳ ಆರೋಗ್ಯಾಧಿಕಾರಿಯವರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು.
ಯಾವುದೇ ಕಾರಣಕ್ಕೂ ಆರೋಗ್ಯ ತುರ್ತು ಪರಿಸ್ಥಿತಿ ಉಂಟಾಗದಂತೆ ಪುರವಾಸಿಗಳು ಸ್ವಯಂ ನಿಯಂತ್ರಣ ಹೇರಿಕೊಂಡು ಸರಕಾರ ಹಾಗೂ ಅಧಿಕಾರಿಗಳೊಂದಿಗೆ ಸಹಕರಿಸುವ ಮೂಲಕ ಮಹಾಮಾರಿಯ ನಿರ್ಮೂಲನೆಗೆ ಕೈ ಜೋಡಿಸುವಂತೆ ಅವರು ವಿನಂತಿಸಿದ್ದು, ಎಲ್ಲ 27 ವಾರ್ಡುಗಳ ಸದಸ್ಯರೂ ತಮ್ಮ ವಾರ್ಡುಗಳ ಬಗ್ಗೆ ನಿಗಾ ಇರಿಸಿಕೊಂಡು ಕೋವಿಡ್ ನಿರ್ಮೂಲನೆಗೆ ಸ್ಪಂದಿಸುವಂತೆ ಅವರು ಸದಸ್ಯರನ್ನು ವಿನಂತಿಸಿದ್ದಾರೆ.
ಸೋಮವಾರ ಸಚಿವರು ಹಾಗೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ, ಕೈಕಂಬ ನಗರ ಆರೋಗ್ಯ ಪ್ರಾಥಮಿಕ ಕೇಂದ್ರ, ತಾಲೂಕು ಆರೋಗ್ಯಾಧಿಕಾರಿ ಕಚೇರಿಗೆ ಭೇಟಿ ನೀಡಿ ಪುರಸಭಾ ವ್ಯಾಪ್ತಿಯ ಕೋವಿಡ್ ಪಾಸಿಟಿವ್ ಸಕ್ರಿಯ ಪ್ರಕರಣಗಳ ಬಗ್ಗೆ ಹಾಗೂ ಪುರಸಭಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಯಾವುದೇ ಕಾರಣಕ್ಕೂ ಜನ ಅತ್ಯಂತ ಅನಿವಾರ್ಯ ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಹೊರಬರಲೇ ಬಾರದು. ಮನೆಯಲ್ಲೇ ಗರಿಷ್ಠ ಪ್ರಮಾಣದಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಮಹಾಮಾರಿಯನ್ನು ಒದ್ದೋಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದರು, ಪುರಸಬಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಈ ಸಂದರ್ಭ ಜೊತೆಗಿದ್ದರು.