ಬಂಟ್ವಾಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ: ಕ್ರಮಕ್ಕೆ ಶಾಸಕ ರಾಜೇಶ್ ನಾಯ್ಕ್ ಸೂಚನೆ
ಬಂಟ್ವಾಳ: ಬಂಟ್ವಾಳದ ಹಾಸ್ಟೆಲ್ ಗಳನ್ನು ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ತಿಳಿಸಿದ್ದಾರೆ. ಬಂಟ್ವಾಳದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಬಂಟ್ವಾಳ ತಾಲೂಕಿನಲ್ಲಿ 200ಕ್ಕೂ ಅಧಿಕ ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ 15 ಮಂದಿ ಕೊರೋನ ರೋಗಿಗಳು ಇದ್ದು ಅವರಲ್ಲಿ 5 ಮಂದಿ ತುರ್ತು ನಿಗಾ ಘಟಕದಲ್ಲಿ ಮತ್ತು 9 ಮಂದಿ ಜನರಲ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಮದಪದವಿನ ಎರಡು, ಕಲ್ಲಡ್ಕ, ವಿಟ್ಲ, ವಗ್ಗದ ತಲಾ ಒಂದು ಹಾಸ್ಟೆಲ್ ಗಳನ್ನು ಕೋವಿಡ್ ಆರೈಕೆ ಕೇಂದ್ರವಾಗಿ ಮಾರ್ಪಡಿಸಲಾಗಿದ್ದು ಈ ಒಟ್ಟು ಐದು ಹಾಸ್ಟೆಲ್ ಗಳಲ್ಲಿ 250 ಬೆಡ್ ಗಳು ಲಭ್ಯವಾಗಲಿದೆ. ಎಲ್ಲಾ ಬೆಡ್ ಗಳಿಗೂ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ತಾಲೂಕಿನ ಎಲ್ಲಾ ವೈದ್ಯರು, ಆಶಾ ಕಾರ್ಯಕರ್ತರು, ಆರೋಗ್ಯ ಸಿಬ್ಬಂದಿ ವಿಶೇಷ ಕಾಳಜಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಜೊತೆಗೆ ವಾರ್ ರೂಂ ಕೂಡ ಜನರ ನಿರಂತರ ಸೇವೆಯಲ್ಲಿ ಇದೆ ಎಂದರು