ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯದೆ ಹಡಿಲು ಬಿಟ್ಟ ಭೂಮಿಯಲ್ಲಿ ಬೆಳೆ ಬೆಳೆಯಲು ಶುಕ್ರವಾರ ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ನಡೆಯಿತು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉಪಸ್ಥಿತರಿದ್ದು, ಸಲಹೆ ಸೂಚನೆಗಳನ್ನು ನೀಡಿದರು. ಜಿಲ್ಲೆಯ ಪ್ರತಿ ಗ್ರಾಮವಾರು ಹಡಿಲು ಭೂಮಿ ಸಮೀಕ್ಷೆ ನಡೆಸಿ ಭತ್ತ ಬೆಳೆಯುವ ಯೋಜನೆ ಕೈಗೆತ್ತಿಕೊಂಡು ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು, ಸಂಘ ಸಂಸ್ಥೆಗಳ ನೆರವಿನೊಂದಿಗೆ ಈ ಯೋಜನೆ ತುರ್ತಾಗಿ ಕೈಗೆತ್ತಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲೆಯಲ್ಲಿ 2.09 ಲಕ್ಷ ಕುಟುಂಬಗಳಿದ್ದು, 2.08 ಲಕ್ಷ ಭೂ ಹಿಡುವಳಿದಾರರು, 1.78 ಲಕ್ಷ ಹೆಕ್ಟೇರ್ ಭೂಮಿಯನ್ನು ಹಿಡುವಳಿ ಹೊಂದಿದ್ದು, ಕಳೆದ ಸಾಲಿನಲ್ಲಿ 37,817.50 ಎಕರೆ ಪ್ರದೇಶದಲ್ಲಿ 7.56,350 ಕ್ವಿಂಟಾಲ್ ಭತ್ತ ಬೆಳೆಯಲಾಗಿದೆ ಜಿಲ್ಲೆಯಲ್ಲಿ ಒಟ್ಟು ಭತ್ತದ ಹಡಿಲು ಭೂಮಿ 2,392.75 ಹೆಕ್ಟೇರ್ ಪ್ರದೇಶವಿದ್ದು, ಕ್ರಮವಾಗಿ ಮಂಗಳೂರು 2125 ಹೆಕ್ಟೇರ್, ಬಂಟ್ವಾಳ 150 ಹೆಕ್ಟೇರ್, ಬೆಳ್ತಂಗಡಿ 85 ಹೆಕ್ಟೇರ್, ಪುತ್ತೂರು 20 ಹೆಕ್ಟೇರ್, ಸುಳ್ಯ 112.75 ಹೆಕ್ಟೇರ್ ಭತ್ತದ ಹಡಿಲು ಭೂಮಿ ಇದೆ ಎಂಬ ಮಾಹಿತಿ ನೀಡಲಾಯಿತು.ಹಡಿಲು ಭೂಮಿಯನ್ನು ಗ್ರಾಮವಾರು ಗುರುತಿಸುವುದರೊಂದಿಗೆ ಗ್ರಾಮದಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭೂ ಮಾಲೀಕರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಪ್ರೇರೇಪಿಸಬೇಕು ಎಂದು ಸಚಿವರು ಹೇಳಿದರು. ಎರಡು ವರ್ಷಕ್ಕೂ ಹೆಚ್ಚು ಕಾಲ ಕೃಷಿ ಭೂಮಿಯನ್ನು ಹಡಿಲು ಬಿಟ್ಟರೆ ಅಂತಹ ಕೃಷಿ ಭೂಮಿಯನ್ನು ಸರಕಾರದ ಸುಪರ್ದಿಗೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದಕ್ಕೆ ಯಾರೊಬ್ಬರೂ ಆಸ್ಪದ ನೀಡದೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್ ಇದ್ದರು.