ಬಂಟ್ವಾಳ: ಕೋವಿಡ್ ಹಿನ್ನೆಲೆಯಲ್ಲಿ ಭಾನುವಾರ ಕರ್ಫ್ಯೂಗೆ ಬಂಟ್ವಾಳ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದೆ. ಬೆಳಗ್ಗೆ ನಿಗದಿತ ಅವಧಿಯಲ್ಲಿ ಆಟೊಗಳು, ವಾಹನಗಳು ಸಂಚರಿಸುತ್ತಿದ್ದರೆ, ಬಳಿಕ ಸುಮಾರು ಹತ್ತೂವರೆ ನಂತರ ಚಟುವಟಿಕೆಗಳು ಬಂದ್ ಆದವು. ಶುಭ ಮುಹೂರ್ತ ಭಾನುವಾರ ಇದ್ದ ಕಾರಣ, ತಾಲೂಕಿನಾದ್ಯಂತ ಹಲವು ಕಡೆಗಳಲ್ಲಿ ಮದುವೆ ಕಾರ್ಯಕ್ರಮಗಳು ನಿಗದಿಯಾಗಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ನಡೆದವು. ಆಯಾ ಗ್ರಾಪಂಗಳ ಜವಾಬ್ದಾರಿಯುತ ಅಧಿಕಾರಿಗಳು ಈ ಸಂದರ್ಭ ನಿಯಮ ಉಲ್ಲಂಘನೆಯಾಗದಂತೆ ಗಮನ ಹರಿಸಿದರು. ಬೆಳಗ್ಗೆ ಹಾಲು, ತರಕಾರಿ, ದಿನಸಿ, ಮೀನುಮಾಂಸ, ಮೆಡಿಕಲ್ ಸಹಿತ ಅಗತ್ಯ ವಸ್ತುಗಳ ಅಂಗಡಿ ತೆರೆದಿದ್ದು, ಕಳೆದ ವರ್ಷದಂತೆ ಗ್ರಾಹಕರು ಅಂಗಡಿಗಳ ಮುಂದೆ ಮುಗಿಬೀಳಲಿಲ್ಲ. ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್.ಆರ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು ನೇತೃತ್ವದಲ್ಲಿ ಭಾನುವಾರವೂ ಕಂದಾಯ ಇಲಾಖೆ ಸಿಬ್ಬಂದಿ, ಬಂಟ್ವಾಳದ ಪೊಲೀಸ್ ಡಿವೈಎಸ್ಪಿ ವೆಲಂಟೈನ್ ಡಿಸೋಜ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ನಾಗರಾಜ್, ಇನ್ಸ್ ಪೆಕ್ಟರ್ ಚೆಲುವರಾಜ್, ಎಸ್ಸೈಗಳಾದ ಪ್ರಸನ್ನ, ಅವಿನಾಶ್, ಸಂಜೀವ, ಕಲೈಮಾರ್, ರಾಜೇಶ್, ವಿನೋದ್ ರೆಡ್ಡಿ ಮತ್ತಿತರರು ತಮ್ಮ ಠಾಣಾ ವ್ಯಾಪ್ತಿಗಳಲ್ಲಿ ಕೋವಿಡ್ ನಿಯಮ ಪಾಲನೆಗೆ ಸಿಬ್ಬಂದಿ ಜೊತೆ ನಿಗಾ ವಹಿಸಿದರು. ‘