ಬಂಟ್ವಾಳ: ಬಂಟ್ವಾಳ ತಹಸೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ತಂಡ ಕಲ್ಲಡ್ಕ ಮೇಲ್ಕಾರ್ ಸಹಿತ ಬಂಟ್ವಾಳ ತಾಲೂಕಿನಾದ್ಯಂತ ಕಾರ್ಯಾಚರಣೆ ನಡೆಸಿ, ಸರ್ಕಾರದ ಮಾರ್ಗಸೂಚಿ ಪಾಲನೆಗೆ ಸೂಚಿಸಿತು.ಕಲ್ಲಡ್ಕದಲ್ಲಿ ಬೆಳಗ್ಗೆಯೇ ಕಾರ್ಯಾಚರಣೆಗಿಳಿದ ತಹಸೀಲ್ದಾರ್ ರಶ್ಮಿ ಎಸ್.ಆರ್, ಸರಕಾರ ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ಎ.22ರಿಂದ ಮೇ 4ರ ವರೆಗೆ ಹಗಲು ಹೊತ್ತಲ್ಲಿ ಮೆಡಿಕಲ್, ರೇಷನ್ ಅಂಗಡಿ, ದಿನಸಿ, ತರಕಾರಿ, ಹಣ್ಣು, ಹಾಲು, ಮೀನು ಮತ್ತು ಮಾಂಸ, ಬ್ಯಾಂಕ್, ಸೆಲೂನ್, ಬ್ಯೂಟಿ ಪಾರ್ಲರ್ ಹಾಗೂ ಕಟ್ಟಡ ಕಾಮಗಾರಿಗಳಿಗೆ ಅಗತ್ಯವಿರುವ ವಸ್ತುಗಳ ಮಾರಾಟದ ಅಂಗಡಿಗಳಿಗೆ ಮಾತ್ರ ತೆರೆದಿಡಲು ಅವಕಾಶ ಇದೆ. ಬಾರ್, ಹೊಟೇಲ್ ಮತ್ತು ವೈನ್ ಶಾಪ್‌ಗಳು ತೆರೆದರೂ ಪಾರ್ಸೆಲ್‌ಗಷ್ಟೇ ಅವಕಾಶ. ಇದನ್ನು ಹೊರತು ಪಡಿಸಿ ಬಾಕಿ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡಬೇಕು ಎಂದು ಸೂಚಿಸಿದರು. ಮಾಸ್ಕ್ ಧರಿಸದೆ ಬಂದ ಹಾಗು ಸಾಮಾಕಿಕ ಅಂತರ ಕಾಪಾಡದ ಗ್ರಾಹಕರಿಗೆ ಯಾವುದೇ ವಸ್ತುಗಳನ್ನು ನೀಡಬೇಡಿ ಎಂದು ಅಂಗಡಿಗಳ ಮಾಲಕರಿಗೆ ಸೂಚಿಸಿದರು. ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ಜನರ ಸಂಚಾರಕ್ಕೆ ಮತ್ತು ವಾಹನಗಳ ಓಡಾಟಕ್ಕೂ ಯಾವುದೇ ನಿರ್ಬಂಧ ಇಲ್ಲ. ಆದರೆ ಕೊರೋನ ನಿಯಂತ್ರಿಸಲು ಸರಕಾರ ಹೊರಡಿಸಿರುವ ನಿಯಮಗಳನ್ನು ಪಾಲಿಸುವಂತೆ ಜನರಿಗೆ ಮತ್ತು ವಾಹನ ಸವಾರರಿಗೆ ಪೊಲೀಸರು ಮತ್ತು ಅಧಿಕಾರಿಗಳು ಸೂಚಿಸಿದರು. ಕುಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು, ಗ್ರಾಮ ಲೆಕ್ಕಾಧಿಕಾರಿಗಳು, ಸಿಬ್ಬಂದಿ ಈ ಸಂದರ್ಭ ಕಾರ್ಯಾಚರಣೆ ತಂಡದಲ್ಲಿದ್ದರು.