ಬಂಟ್ವಾಳ: ದಲಿತ ಮುಖಂಡ, ಸಂಘಟಕ, ಸಾಮೂಹಿಕ ವಿವಾಹ ಏರ್ಪಡಿಸುವ ಮೂಲಕ ಗಮನ ಸೆಳೆದಿದ್ದ ಬಂಟ್ವಾಳದ ರಾಜ ಪಲ್ಲಮಜಲು (53) ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ನಿಧನ ಹೊಂದಿದರು. ಪತ್ನಿ, ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅವರು ಅಗಲಿದ್ದಾರೆ. ನವಚೇತನ ಸೇವಾ ಟ್ರಸ್ಟ್ ಬಂಟ್ವಾಳ ಇದರ ಅಧ್ಯಕ್ಷರಾಗಿ ಸುಮಾರು 18 ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ವರ್ಷಂಪ್ರತಿ ಏರ್ಪಡಿಸುತ್ತಾ ಬರುತ್ತಿದ್ದ ಅವರು ರಾಯಿಯಲ್ಲಿ ಉದ್ಯಮವನ್ನು ಸ್ಥಾಪಿಸಿದ್ದರು. ಹಲವು ಸಾಮಾಜಿಕ ,ಶೈಕ್ಷಣಿಕ,ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ದಲಿತರ ಮತ್ತು ಸಾಮಾಜಿಕ ನ್ಯಾಯ ವಂಚಿತರ ಪರ ಧ್ವನಿಯಾಗಿದ್ದರು. ಜಿಲ್ಲೆಯಲ್ಲಿ ನಡೆದ ಹಲವು ದಲಿತರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತಿದ್ದರು.ಸಾರ್ವಜನಿಕ ಉಚಿತ ಸಾಮೂಹಿಕ ವಿವಾಹ ನಡೆಸುವ ಮೂಲಕ ಉತ್ತಮ ಸಮಾಜ ಸೇವಕ ಎನಿಸಿಕೊಂಡಿದ್ದರು.ಇವರ ಅಕಾಲಿಕ ಅಗಲಿಕೆಯಿಂದ ಸಮಾಜಕ್ಕೆ ಅಪಾರ ನಷ್ಟವಾಗಿದೆ ಎಂದು ಡಿ ಕೆ ಡಿಸ್ಟ್ರಿಕ್ಟ್ ಅಂಬೇಡ್ಕರ್ ಫೋರಂ ಫಾರ್ ಸೋಷಿಯಲ್ ಜಸ್ಟಿಸ್ ಅಧ್ಯಕ್ಷ ಭಾನುಚಂದ್ರ ಕೃಷ್ಣಾಪುರ ಸಂತಾಪ ಸೂಚಿಸಿದ್ದಾರೆ.