ಬಂಟ್ವಾಳದಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಶಿಕ್ಷಕ ಧನರಾಜ್
ಬಂಟ್ವಾಳ: ನಿರಂತರ ಓದುವಿಕೆ ಮೂಲಕ ಮಹಾಮಾನವತಾವಾದಿಯಾದ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲ ಸಮಾಜಕ್ಕೂ ದಾರಿದೀಪವಾದವರು ಎಂದು ಶಿಕ್ಷಕ ಡಿ.ಆರ್. ಧನರಾಜ್ ಹೇಳಿದರು.
ಬಂಟ್ವಾಳ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಂಬೇಡ್ಕರ್ ಜಯಂತಿ ಆಚರಣೆಯ ಹಿನ್ನೆಲೆಯಲ್ಲಿ ಉಪನ್ಯಾಸ ನೀಡಿದ ಅವರು, ಪ್ರಪಂಚದ ಒಂಭತ್ತು ಭಾಷೆಗಳ ಹಿಡಿತ ಇದ್ದ ಅಂಬೇಡ್ಕರ್ ಅವರ ಜನ್ಮದಿನವನ್ನು ಕೆನಡಾದಲ್ಲಿ ಸಮಾನತೆಯ ದಿನ ಎಂದು ಆಚರಿಸುತ್ತಿರುವುದು ಅವರೊಬ್ಬ ವಿಶ್ವನಾಯಕ, ಮಹಾಮಾನವತಾವಾದಿ ಎಂಬುದನ್ನು ತೋರಿಸುತ್ತದೆ. ಸಿಡ್ನಿ ವಿವಿ ಲೈಬ್ರರಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಪ್ರತಿಮೆ ಮಾಡಲಾಗಿರುವುದು ಅವರ ವಿಶ್ವಮನ್ನಣೆಯನ್ನು ಗುರುತಿಸುತ್ತದೆ. ಅಂಬೇಡ್ಕರ್ ಅವರು ಒಂದು ಜನಾಂಗಕ್ಕಾಗಿ ಹೋರಾಟ ಮಾಡಿದ್ದಲ್ಲ. ಮಹಿಳಾಪರ ಚಿಂತನೆ ಅವರಿಗಿತ್ತು ಹೆಣ್ಣುಮಕ್ಕಳಿಗೆ ಮತದಾನದ ಹಕ್ಕು ಬೇಕು ಎಂದವರೇ ಅಂಬೇಡ್ಕರ್ ಎಂದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ತನ್ನದೇ ಶೈಲಿಯ ಹೋರಾಟದ ಮೂಲಕ ಸಾಧನೆ ಮಾಡಿದರು, ಅವರ ಆದರ್ಶ ಪಾಲನೆ ಇಂದಿನ ಅಗತ್ಯ ಎಂದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ತಹಸೀಲ್ದಾರ್ ರಶ್ಮಿ ಎಸ್.ಆರ್. ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ತಾ.ಪಂ.ಸಹಾಯಕ ನಿರ್ದೇಶಕ ಶಿವಾನಂದ, ತಾಪಂ ಸದಸ್ಯ ಪ್ರಭಾಕರ ಪ್ರಭು ಉಪಸ್ಥಿತರಿದ್ದರು. ಸಮಾಜ ಕಲ್ಯಾಣಾಧಿಕಾರಿ ಜಯಶ್ರೀ ಸ್ವಾಗತಿಸಿದರು. ಆಶ್ರಮ ಶಾಲೆಯ ಮುಖ್ಯಶಿಕ್ಷಕ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಭವ್ಯ ವಂದಿಸಿದರು.