ಬಂಟ್ವಾಳ: ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಏಪ್ರಿಲ್ ತಿಂಗಳಿನಿಂದ ಸತತ 100 ದಿನಗಳ ಕಾಲ ನಡೆಯುವ ಈ ಅಭಿಯಾನ ಗ್ರಾಮೀಣ ಜನರನ್ನು ಜಲಸಾಕ್ಷರರನ್ನಾಗಿಸುವ ಮೂಲಕ ಜಲಜಾಗೃತಿ ಮೂಡಲಿ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದ.ಕ.ಜಿಲ್ಲಾ ಪಂಚಾಯಿತಿ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ಸಹಯೋಗದಲ್ಲಿ ನಡೆಯುವ ಅಭಿಯಾನದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು. ವಿಶೇಷ ಅಭಿಯಾನದಡಿ ಆದ್ಯತೆ ಮೇರೆಗೆ ಕೈಗೊಳ್ಳಬಹುದಾದ ಕಾಮಗಾರಿಗಳಾದ ಸಮಗ್ರ ಕೆರೆ ಅಭಿವೃದ್ಧಿ, ಸಾರ್ವಜನಿಕ ತೋಡಿನ ಹೂಳೆತ್ತುವಿಕೆ, ತೆರೆದ ಬಾವಿ, ಇಂಗುಗುಂಡಿ, ಕೆರೆ ನಿರ್ಮಾಣ, ಜಲಮರುಪೂರಣ ಘಟಕ, ಕೃಷಿ ಹೊಂಡ, ಸರ್ಕಾರಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಘಟಕ, ಕಿಂಡಿ ಅಣೆಕಟ್ಟು ನಿರ್ಮಾಣದ ಕುರಿತು ಮಾಹಿತಿ ನೀಡುವ ಅಭಿಯಾನ ಇದಾಗಿದೆ. ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಮ್ಯಾನೇಜರ್ ಶಾಂಭವಿ ರಾವ್, ತಾಪಂ ಸದಸ್ಯರಾದ ಪ್ರಭಾಕರ ಪ್ರಭು, ರಮೇಶ್ ಕುಡ್ಮೇರು, ವನಜಾಕ್ಷಿ ಮತ್ತಿತರರು ಉಪಸ್ಥಿತರಿದ್ದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.