ಬಂಟ್ವಾಳ: ಬಂಟ್ವಾಳ ತಾಲೂಕಿನ ವಿಟ್ಲಪಡ್ನೂರು ಗ್ರಾಮದ ಕೊಡುಂಗಾಯಿ ಎಂಬಲ್ಲಿ ಕಾರೊಂದರಲ್ಲಿ ಸಾಗಿಸುತ್ತಿದ್ದ 2 ಕೆ.ಜಿ.ಗಾಂಜಾವನ್ನು ಸ್ವಾಧೀನಪಡಿಸಿಕೊಂಡಿರುವ ವಿಟ್ಲ ಪೊಲೀಸರು ನಾಸೀರ್ ಎಂಬಾತನನ್ನು ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳಾದ ಬಾಕ್ರಬೈಲಿನ ಬಾರಿಕ್ ಹಾಗೂ ಪಾತೂರಿನ ಮುಸ್ತಾಫ ತಲೆ ಮರೆಸಿಕೊಂಡಿದ್ದು ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ .
ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ ನಿರ್ದೇಶನದಂತೆ ಬಂಟ್ವಾಳ ಡಿ ವೈ ಎಸ್ಪಿ ವೆಲೈಂಟಿನ್ ಡಿ ಸೋಜಾ ರವರ ಸೂಚನೆಯಂತೆ ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸು ಠಾಣಾ ಪಿ.ಎಸ್.ಐ ವಿನೋದ್ ಎಸ್.ಕೆ ಅವರು ಸಿಬ್ಬಂದಿಗಳಾದ ಎಚ್.ಸಿ ಗಳಾದ ಪ್ರಸನ್ನ , ಜಯರಾಮ ಕೆ.ಟಿ , ಪ್ರತಾಪ್ ರೆಡ್ಡಿ , ಲೋಕೇಶ , ಹೇಮರಾಜ್ ಹಾಗೂ ವಿನಾಯಕ ಜೊತೆ ಮಂಗಳವಾರ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಕರಣ ಪತ್ತೆಯಾಗಿದೆ.
ರಾತ್ರಿ ಸುಮಾರು 7.30 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಪಡೂರು ಗ್ರಮದ ಕೊಡಂಗಾಯಿ ಎಂಬಲ್ಲಿ ವಾಹನ ತಪಾಸಣೆ ನಡೆಸುವ ಸಮಯ 2 ಕೆ.ಜಿ ತೂಕದ 20 ಸಾವಿರ ರೂಪಾಯಿ ಬೆಲೆಬಾಳುವ ಗಾಂಜಾವನ್ನು ಮಾರುತಿ ಆಲ್ಲೋ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ 2 ಲಕ್ಷ ರೂಪಾಯಿ ಬೆಲೆ ಬಾಳುವ ಕಾರು ಸಮೇತ ಗಾಂಜಾವನ್ನು ಸ್ವಾಧೀನಪಡಿಸಿಕೊಂಡು ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ಪಾತೂರು ಕಜೆ ವಾಸಿ ನಾಸಿರ್ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ಈತನನ್ನು ಮಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು , ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಬಂಟ್ವಾಳ ಪೊಲೀಸು ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ ನೇತೃತ್ವದಲ್ಲಿ ನಡೆಸಲಾಗುತ್ತಿದೆ.