ಬಂಟ್ವಾಳ: ಸೋಮವಾರ ನಡೆದ ಮಾಣಿಲ ಗ್ರಾಪಂ ಉಪಚುನಾವಣೆಯ ಮತ ಎಣಿಕೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಬುಧವಾರ ನಡೆದಿದ್ದು, ವಿಷ್ಣುಕುಮಾರ್ ಆಯ್ಕೆಯಾಗಿದ್ದಾರೆ.
ಎರಡು ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ರಾಜೇಶ್ ಕುಮಾರ್ ಬಾಳೆಕಲ್ಲು ಎರಡರಲ್ಲೂ ಜಯ ಗಳಿಸಿದ ಹಿನ್ನೆಲೆಯಲ್ಲಿ ಒಂದು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಮಾಣಿಲ, ಪುದುವಿನ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಇವುಗಳ ಪೈಕಿ ಪುದು ಗ್ರಾಪಂನಲ್ಲಿ ವೀಣಾ ಎಂಬವರು ಅವಿರೋಧ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ ಮಾಣಿಲದಲ್ಲಿ ಮಾತ್ರ ಚುನಾವಣೆ ನಡೆದಿತ್ತು. ಮಾಣಿಲದ ಒಂದು ಸ್ಥಾನಕ್ಕೆ ಎಂಟು ನಾಮಪತ್ರಗಳು ಸಲ್ಲಿಕೆ ಆಗಿದ್ದು, ಇವರಲ್ಲಿ ಐದು ನಾಮಪತ್ರಗಳನ್ನು ಹಿಂಪಡೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರು ಅಭ್ಯರ್ಥಿಗಳಾದ ಮೊಯ್ದೀನ್ ಕುಞ, ವಿಷ್ಣುಕುಮಾರ್ ಕೊಮ್ಮುಂಜೆ, ಸೂರಜ್ ರೈ ಕೆಳಗಿನಮನೆ ಕಣದಲ್ಲಿದ್ದರು. 1025 ಮಂದಿ ಮತದಾರರಿರುವ ಈ ಸ್ಥಾನದಲ್ಲಿ 637 ಮತ ಚಲಾವಣೆಯಾಗಿದ್ದು, ವಿಷ್ಣುಕುಮಾರ್ 364 ಮತ ಗಳಿಸಿದ್ದಾರೆ. ಸುರಜ್ ರೈ 226 ಮತ ಗಳಿಸಿದರೆ, ಮೊಯ್ದೀನ್ ಅವರು 41 ಮತ ಗಳಿಸಿದರು. 6 ಮತಗಳು ತಿರಸ್ಕೃತಗೊಂಡಿವೆ.
ಚುನಾವಣಾಧಿಕಾರಿಯಾಗಿ ಮೆಸ್ಕಾಂ ಎಇಇ ಪ್ರವೀಣ್ ಜೋಷಿ, ಸಹಾಯಕ ಚುನಾವಣಾಧಿಕಾರಿ ಪಿಡಿಒ ಅಶೋಕ್ ಎನ್.ಜಿ, ಚುನಾವಣಾ ಉಪತಹಸೀಲ್ದಾರ್ ಕೆ.ಸಿದ್ದರಾಜು, ಮತ ಎಣಿಕೆ ಮೇಲ್ವಿಚಾರಕರಾಗಿ ಕೇಂದ್ರ ಸ್ಥಾನೀಯ ಶಿರಸ್ತೇದಾರ್ ಅಣ್ಣು ನಾಯ್ಕ್, ಮತ ಎಣಿಕೆ ಸಹಾಯಕರಾಗಿ ಸೀತಾರಾಮ ಪೂಜಾರಿ ಕಮ್ಮಾಜೆ, ವಿಶುಕುಮಾರ್,ಹಾಗೂ ಚುನಾವಣಾ ಪ್ರಥಮ ದರ್ಜೆ ಸಹಾಯಕರಾದ ರಾಜ್ ಕುಮಾರ್, ಕಾರ್ತಿಕ್ ಹಾಗೂಮಾಣಿಲ ಗ್ರಾಮ ಲೆಕ್ಕಾಧಿಕಾರಿ ಶಿವನಾಂದ ನಾಟೇಕರ್ ಚುನಾವಣಾ ಕಚೇರಿ ಸಿಬ್ಬಂದಿಗಳಾದ ಚಂದು, ಕಿರಣ್ಈ ಸಂದರ್ಭ ಉಪಸ್ಥಿತರಿದ್ದರು.