ಬಂಟ್ವಾಳ: ಬುಧವಾರ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಂಟ್ವಾಳದ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ ಎಂದರು.
6 ಕೋಟಿ ರೂ ವೆಚ್ಚದಲ್ಲಿ ಪುಂಜಾಲಕಟ್ಟೆ ಪಿ.ಎಚ್.ಸಿ. ಮೇಲ್ದರ್ಜೆಗೇರಿಸಲಾಗುತ್ತದೆ. ಇದನ್ನು ಸೂಪರ್ ಸ್ಪೆಶಾಲಿಟಿಯಂಥ ರೀತಿಯಲ್ಲಿ ಚಿಕಿತ್ಸಾ ಕೇಂದ್ರವನ್ನಾಗಿಸಲಾಗುವುದು. ಎಲ್ಲ ಸಿಬ್ಬಂದಿಗೂ ಕ್ವಾರ್ಟರ್ಸ್ ಸಹಿತ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದರು. ಡಿ ಗ್ರೂಪ್ ನೌಕರರ ಸಂಖ್ಯೆ ಹೆಚ್ಚಳಕ್ಕೆ ಸೂಚಿಸಿದ್ದು, ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶಾಸಕ ರಾಜೇಶ್ ನಾಯ್ಕ್ ಪ್ರತಿ ಹದಿನೈದು ದಿನಗಳಿಗೊಮ್ಮೆ ಆಸ್ಪತ್ರೆಯ ಅಗತ್ಯಗಳ ಕುರಿತು ಸಮಾಲೋಚಿಸುವುದು ಮಾದರಿ ಕಾರ್ಯ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಆಸ್ಪತ್ರೆಯ ಕುರಿತು ಸಚಿವರಿಗೆ ವಿವರಿಸಿದರು. ಜಿಪಂ ಸಿಇಒ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪಲತಾ, ಇಒ ರಾಜಣ್ಣ, ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ರವೀಂದ್ರ ಕಂಬಳಿ, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ ಉಪಸ್ಥಿತರಿದ್ದರು.