ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುಮಾರು ಒಂದು ಗಂಟೆ ಭಾರಿ ಗಾಳಿಯೊಂದಿಗೆ ಸುರಿದ ಮಳೆ, ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಹಲವೆಡೆ ಜನಜೀವನವನ್ನು ಅಸ್ತವ್ಯಸ್ತ ಮಾಡಿಸಿತು. ಪೈಕಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮವೊಂದರಲ್ಲೇ 33 ಮನೆಗಳಿಗೆ ಹಾನಿಗಳುಂಟಾಗಿವೆ. ಬಿ.ಮೂಡ ಗ್ರಾಮದ ಕಾಮಾಜೆ, ಮೈರಾನ್ ಪಾದೆ, ದೈಪಲ ಎಂಬಲ್ಲಿ ರಾತ್ರಿ ಸುಮಾರು 10 ಗಂಟೆಗೆ ಬೀಸಿದ ಭಾರಿ ಗಾಳಿ, ಮಳೆಗೆ ಒಟ್ಟು 33 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 2 ಮನೆಗಳಿಗೆ ತೀವ್ರ ಹಾನಿಗಳುಂಟಾಗಿವೆ. ಸುಮಾರು 3,53,000 ರೂ ನಷ್ಟವುಂಟಾಗಿದೆ ಎಂದು ಕಂದಾಯ ಇಲಾಖೆ ಅಂದಾಜಿಸಿದೆ.
ಇವಲ್ಲದೆ ಅಮ್ಮುಂಜೆ, ಬೆಂಜನಪದವು, ಕಳ್ಳಿಗೆ, ಅಮ್ಟಾಡಿ, ನರಿಕೊಂಬು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ, ಕೃಷಿಗೂ ಅಪಾರ ಹಾನಿಯುಂಟಾಗಿದೆ. ಭಾರೀ ಮಳೆಗೆ ಎಚ್. ಟಿ. ಲೈನ್ ಮೇಲೆಯೇ ಮರಗಳು ಉರುಳಿವೆ. ಇದರಿಂದಾಗಿ ಸೋಮವಾರ ರಾತ್ರಿಯಿಂದಲೇ ಮಂಗಳವಾರ ಇಡೀ ದಿನ ಮೆಸ್ಕಾಂನ ಪವರ್ ಮ್ಯಾನ್ ಗಳು ಸುರಿಯುವ ಮಳೆಯನ್ನು ಲೆಕ್ಕಿಸದೆ ವಿದ್ಯುತ್ ಪೂರೈಕೆ ಒದಗಿಸಲು ಪ್ರಯತ್ನಪಟ್ಟರು. ಕಾಮಾಜೆಯಲ್ಲಿ ಬುಡಾ ಸದಸ್ಯ ಭಾಸ್ಕರ ಟೈಲರ್ ಸಹಿತ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.