ಬಂಟ್ವಾಳ: ಬಂಟ್ವಾಳ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ನಮ್ಮ ಗ್ರಾಮ – ನಮ್ಮ ಜವಾಬ್ದಾರಿ ಎಂಬ ಧೇಯೋದ್ದೇಶದೊಂದಿಗೆ ನಮ್ಮ ನಡಿಗೆ – ತ್ಯಾಜ್ಯ ಮುಕ್ತ ಕಡೆಗೆ ವಿಶೇಷ ಆಂದೋಲನದ ಪ್ರಚಾರ ವಾಹನಕ್ಕೆ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಚಾಲನೆ ನೀಡಿದರು.
ನಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಗ್ರಾಮದ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಬೇಕು ಎಂದು ಈ ಸಂದರ್ಭ ಅವರು ಹೇಳಿದರು.
ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ವೈಜ್ಞಾನಿಕ ವಲೇವಾರಿಗೆ ಪ್ರತಿಯೊಬ್ಬರು ಶ್ರಮಿಸಬೇಕು. ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕ ಮಾಡಬೇಕು. ಮಾರ್ಗ ಬದಿಯಲ್ಲಿ ಕಸವನ್ನು ಸುರಿಯಬಾರದು ಎಂದರು. ಅಧ್ಯಕ್ಷತೆ ವಹಿಸಿದ್ದ ತಾ. ಪಂ. ಕಾರ್ಯ ನಿರ್ವಾಹಕ ಅಧಿಕಾರಿ ರಾಜಣ್ಣ ಮಾತನಾಡಿ, ತಾಲೂಕು ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಹಾಗೂ ವಿಲೆವಾರಿಗೆ ಸ್ವಚ್ಛತಾ ಸಂಕೀರ್ಣ ರೂಪುಗೊಳ್ಳುತ್ತಿದ್ದು, ಸ್ವಚ್ಛತಾ ವಾಹಿನಿ ವಾಹನಗಳು ಪ್ರತೀ ಮನೆಗೆ ಭೇಟಿ ನೀಡಿ ಕಸವನ್ನು ಸಂಗ್ರಹಿಸುವ ಕೆಲಸ ಜಾರಿಯಲ್ಲಿದೆ. ಸ್ವಚ್ಚತಾ ಕೆಲಸಗಾರರ ಆರೋಗ್ಯಕ್ಕೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಸ್ವಚ್ಛತೆಯ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು. ವಿಶೇಷ ಆಂದೋಲನದ ಪ್ರಚಾರ ವಾಹನವು ಗ್ರಾಮದೆಲ್ಲೆಡೆ ಸಂಚರಿಸಿ ಸ್ವಚ್ಛತೆಯ ಜಾಗೃತಿ ಮೂಡಿಸಲಿದೆ. ಸಹಾಯಕ ನಿರ್ದೇಶಕರಾದ ಶಿವಾನಂದ ಪೂಜಾರಿ, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಡೊಂಬಯ್ಯ ಇಡ್ಕಿದು, ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಆಲಿ, ಮಾನೇಜರ್ ಶಾಂಭವಿ ಎಸ್ . ರಾವ್, ಪ್ರಶಾಂತ್ ಬಳಂಜ ಮತ್ತಿತರರು ಉಪಸ್ಥಿತರಿದ್ದರು.