ಬಂಟ್ವಾಳ: ಮಂಚಿ ಇರಾದ ಧರ್ಮಜಾಗರಣಾ ಪ್ರತಿಷ್ಠಾನದ ವಿಂಶತಿ ಕಾರ್ಯಕ್ರಮದ ಅಂಗವಾಗಿ ಧಾರ್ಮಿಕ ಮಹೋತ್ಸವ ವೇ.ಮೂ. ಕೊಬ್ರಿಮಠ ಶ್ರೀಕಾಂತ ಬನ್ನಿಂತಾಯ ನೇತೃತ್ವದಲ್ಲಿ ಮಂಚಿ ಕೊಳ್ನಾಡಿನ ಕನಕಗಿರಿಯಲ್ಲಿ ಮಾ.28ರ ಭಾನುವಾರ ನಡೆಯಲಿದೆ ಎಂದು ಅದರ ಮುಖ್ಯಸ್ಥ ಕೈಯೂರು ನಾರಾಯಣ ಭಟ್ ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಪ್ರಮುಖರಾದ ಅನಾರು ಕೃಷ್ಣ ಶರ್ಮಾ, ಸಿ.ಎಚ್.ಸೀತಾರಾಮ ಶೆಟ್ಟಿ, ರಾಮಕೃಷ್ಣ ನಾಯಕ್ ಕೋಕಳ, ಭಾಸ್ಕರ ಕುಲಾಲ್ ಸೂತ್ರಬೈಲ್ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಸ್ಕಾರ, ಸಂಘಟನೆ, ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ಮಹೋತ್ಸವ ನಡೆಯಲಿದ್ದು, ಮಹಾಗಣಪತಿ ಹೋಮ, ಚಂಡಿಕಾಯಾಗ, ಸಾಮೂಹಿಕ ಕುಂಕುಮಾರ್ಚನೆ, ಧಾರ್ಮಿಕ ಸಭೆ, ಒಡಿಯೂರು ಶ್ರೀಗಳಿಗೆ 60ರ ಅಭಿವಂದನೆ ಹಾಗೂ ಪಾದಯಾತ್ರೆ ಅಂದು ನಡೆಯಲಿದೆ ಎಂದರು. 20 ವರ್ಷಗಳ ಹಿಂದೆ ಮೋಂತಿಮಾರಿನಲ್ಲಿ ನಡೆದ 108 ದಿನ ಅಖಂಡ ಭಜನೆಯ ಸವಿನೆನಪಿಗಾಗಿ ಆರಂಭಿಸಲಾದ ಧರ್ಮಜಾಗರಣಾ ಪ್ರತಿಷ್ಠಾನ 20 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದ್ದು, ಸಂಸ್ಥೆ ನೇತೃತ್ವದಲ್ಲಿ ದೇವಸ್ಥಾನ, ಭಜನಾ ಮಂದಿರ, ದೈವಸ್ಥಾನ, ನಾಗಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳು ನೆರವೇರಿವೆ ಎಂದರು. 28ರಂದು ಬೆಳಗ್ಗೆ 9ಕ್ಕೆ ಸಾಮೂಹಿಕ ಕುಂಕುಮಾರ್ಚನೆ, 10ರಿಂದ ಕುಡ್ತಮುಗೇರುವಿನಿಂದ ಮಂಚಿ ಕನಕಗಿರಿಗೆ ವಾಹನ ಜಾಥ, ಬಳಿಕ ಚಂಡಿಕಾಯಾಗ ಪೂರ್ಣಾಹುತಿ, ಧಾರ್ಮಿಕ ಸಭೆ ನಡೆಯಲಿದ್ದು, ಎಡನೀರು ಶ್ರೀಗಳಾದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡುವರು. ಒಡಿಯೂರು ಸಾಧ್ವಿ ಮಾತಾನಂದಮಯೀ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಶೃಂಗೇರಿ ಮಠ ಆಡಳಿತಾಧಿಕಾರಿ ಸತ್ಯಶಂಕರ ಬೊಳ್ಳಾವ ವಹಿಸುವರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕೊಳ್ನಾಡು ಗ್ರಾಪಂ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಹಾಗೂ ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ ಅತಿಥಿಗಳಾಗಿರುವರು. ಇದೇ ಸಂದರ್ಭ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ 60ರ ಅಭಿವಂದನೆ ನಡೆಸಲಾಗುತ್ತದೆ ಎಂದರು. ಅಪರಾಹ್ನ 3ರಿಂದ ಪಣೋಲಿಬೈಲ್ ಕ್ಷೇತ್ರಕ್ಕೆ ಪಾದಯಾತ್ರೆ ಇರಲಿದೆ.