ಬಂಟ್ವಾಳ: ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿರುವುದು ಹೆಚ್ಚಾಗುತ್ತಿದ್ದಂತೆ, ಕೊರೊನಾ ನಿರೋಧಕ ಲಸಿಕೆಯನ್ನು ಹಾಕುವವರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ಹೆಚ್ಚಿನ ಉತ್ಸಾಹವಿದ್ದು, ಸಮೀಪದ ಆರೋಗ್ಯ ಕೇಂದ್ರಗಳಿಗೆ 60 ವರ್ಷಕ್ಕೆ ಮೇಲ್ಪಟ್ಟವರು ತೆರಳಿ ಚುಚ್ಚುಮದ್ದು ಹಾಕಿಸಿಕೊಂಡು ಬರುತ್ತಿದ್ದಾರೆ. ಈ ಮಧ್ಯೆ ಜನರನ್ನು ಕರೆದುಕೊಂಡು ಹೋಗಲು ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವ ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿರುವ ರಾಜ್ಯದ ಪ್ರಮುಖ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಿಂದ ಬಸ್ ಒಂದನ್ನು ಉಚಿತವಾಗಿ ನೀಡಲಾಗಿದೆ.
ಸ್ಥಳೀಯ ಆಶಾ ಕಾರ್ಯಕರ್ತೆಯರ ನೆರವಿನಿಂದ ವಿದ್ಯಾಕೇಂದ್ರವಿರುವ ಹಾಗೂ ಸುತ್ತಮುತ್ತಲಿನ ಬಾಳ್ತಿಲ, ಗೋಳ್ತಮಜಲು, ಅಮ್ಟೂರು ಗ್ರಾಮಗಳಿಂದ ನೀರಪಾದೆಯಲ್ಲಿ ಇರುವ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳುವವರ ಮಾಹಿತಿಯನ್ನು ಸಂಗ್ರಹಿಸಿ, ಯಾರಿಗೆ ತೆರಳಲು ಅನಾನುಕೂಲವಾಗುತ್ತದೆಯೋ ಅವರಿಗೆ ಶಿಕ್ಷಣ ಸಂಸ್ಥೆಯಿಂದ ಉಚಿತವಾಗಿ ಬಸ್ ಅನ್ನು ಒದಗಿಸಲಾಗಿದೆ. 48 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯದ ಬಸ್ ನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಹಾಗೂ ಕೊರೊನಾದ ಎಲ್ಲ ನಿಯಮಗಳನ್ನು ಪರಿಪಾಲಿಸಿಕೊಂಡು, ಈ ಗ್ರಾಮಗಳಿಂದ ನಿರ್ದಿಷ್ಟ ಸಮಯದಲ್ಲಿ ಅವರನ್ನು ಕರೆದುಕೊಂಡು ನೀರಪಾದೆಯ ಆರೋಗ್ಯ ಕೇಂದ್ರಕ್ಕೆ ತೆರಳಿ, ಲಸಿಕೆ ಹಾಕಿದ ಬಳಿಕ ಅವರನ್ನು ಮನೆಯವರೆಗೆ ಬಿಡಲಾಗುತ್ತಿದೆ. ಹೀಗೆ ಸುಮಾರು 6 ಟ್ರಿಪ್ ಗಳನ್ನು ಮಾಡಲಾಗಿದೆ. ಇದಕ್ಕೆ ಜನರ ಉತ್ತಮ ಪ್ರತಿಕ್ರಿಯೆಯೂ ಇದೆ. ಉಚಿತವಾಗಿ ಸರ್ಕಾರ ಲಸಿಕೆಯನ್ನು ನೀಡುವ ಸಂದರ್ಭ, ಸಾಮಾಜಿಕ ಕಾಳಜಿಯ ಭಾಗವಾಗಿ ಜನರಿಗೆ ಅನುಕೂಲವಾಗಲೆಂದು ಈ ಕ್ರಮವನ್ನು ವಿದ್ಯಾಸಂಸ್ಥೆಯ ಪ್ರಮುಖರಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ ಸಹಿತ ಆಡಳಿತ ಮಂಡಳಿ ತೀರ್ಮಾನಿಸಿ ಒದಗಿಸಿಕೊಟ್ಟಿದ್ದಾರೆ ಎಂದು ಎಂದು ಪದವಿ ಕಾಲೇಜು ಪ್ರಿನ್ಸಿಪಾಲ್ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ತಿಳಿಸಿದ್ದಾರೆ.
ಈಗಾಗಲೇ ಕಲ್ಲಡ್ಕ ಸಂಸ್ಥೆಯ ಬಸ್ ನಲ್ಲಿ ತೆರಳಿದ ಸುಮಾರು 250ರಷ್ಟು ಮಂದಿ ಬಾಳ್ತಿಲದಲ್ಲಿ ಲಸಿಕೆ ಪಡೆದಿದ್ದಾರೆ. ಇದನ್ನು ಗಮನಿಸಿಕೊಂಡು ಸ್ಥಳೀಯ ಉತ್ಸಾಹಿ ಸ್ವಯಂಸೇವಾಸಂಸ್ಥೆಗಳವರೂ ಉಚಿತ ವಾಹನಗಳನ್ನು ಒದಗಿಸುವ ಮೂಲಕ ಮಾದರಿಯಾಗುತ್ತಿದ್ದಾರೆ
ತರಗತಿಯ ಕೊಠಡಿಯೊಳಗೆ ಪಾಠವನ್ನು ಕಲಿಸುವುದರ ಜತೆಗೆ ಸಮಾಜಕ್ಕೆ ನಮ್ಮಿಂದೇನಾದರೂ ಕೊಡುಗೆ ನೀಡಬೇಕು ಎಂಬ ಪರಿಕಲ್ಪನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾಸಂಸ್ಥೆ ನಮ್ಮದು. ಕೋವಿಡ್ ನಿರ್ಮೂಲನೆಗೊಳಿಸುವ ಭಾಗವಾಗಿ ಲಸಿಕೆಯನ್ನು ನೀಡಲು ಆರೋಗ್ಯ ಕೇಂದ್ರಕ್ಕೆ ತೆರಳಲು ಅನಾನುಕೂಲವಾಗುವ ಬಡವರಿಗಾಗಿ ಬಸ್ ಅನ್ನು ವಿದ್ಯಾಸಂಸ್ಥೆಯಿಂದ ಉಚಿತವಾಗಿ ನೀಡಲಾಗಿದ್ದು, ಇದರಿಂದ ಸುತ್ತಮುತ್ತಲಿನ ಮೂರು ಗ್ರಾಮಗಳ ಜನರಿಗೆ ಪ್ರಯೋಜನವಾಗಿದೆ ಎನ್ನುತ್ತಾರೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್.