ಕವರ್ ಸ್ಟೋರಿ

ಇನ್ನೆಷ್ಟು ದಿನ ಬಿ.ಸಿ.ರೋಡಿನ ಬಿಸಿಲಲ್ಲಿ ಬಸ್ಸಿಗಾಗಿ ಕಾಯಬೇಕು?

ಖಾಲಿ ಜಾಗದ ಸದ್ಬಳಕೆಗೆ ಇದು ಸಕಾಲ, ಪಾರ್ಕಿಂಗ್ ಗೂ ಸೂಕ್ತ ಯೋಜನೆ ರೂಪಿಸಬೇಕು

ಸರ್ವೀಸ್ ರೋಡಿನ ಪಕ್ಕದ ಈ ಜಾಗ ನಿರುಪಯುಕ್ತವಾಗಿ ಮೂರು ವರ್ಷಗಳಾಯಿತು.

ಬೆಳಗ್ಗೆ ಏಳು ಗಂಟೆಯಾದೊಡನೆ ಬಿ.ಸಿ.ರೋಡಿನ ಸರ್ವೀಸ್ ರೋಡಿನಲ್ಲಿ ಜನವೋ ಜನ. ಮಂಗಳೂರಿಗೆ ತೆರಳುವ ಖಾಸಗಿ, ಸರ್ಕಾರಿ ಬಸ್ಸುಗಳನ್ನು ಹತ್ತಲು ಅಲ್ಲಿರುವ ಅಂಗಡಿಗಳ ಮುಂದೆ ನಿಲ್ಲುತ್ತಾರೆ. ಬಸ್ಸುಗಳು ಬಂದರೆ ಒಟ್ಟಿಗೇ ಬರುತ್ತವೆ. ಹಾಗೇನಾದರೂ ಬಂದರೆ ರೋಡ್ ಬ್ಲಾಕ್. ಒಂದು ಕಡೆ ಈ ಪರಿಸ್ಥಿತಿ ಇದ್ದರೆ, ಮತ್ತೊಂದು ಬದಿಯಲ್ಲಿ ಧರ್ಮಸ್ಥಳ, ಪುತ್ತೂರು ಕಡೆಗಳಿಗೆ, ಮೈಸೂರು, ಬೆಂಗಳೂರು ಕಡೆಗಳಿಗೆ ಹೋಗುವವರು ಎತ್ತರ, ತಗ್ಗು ಇರುವ ಅತ್ತ ರಸ್ತೆಯೂ ಅಲ್ಲದ, ಇತ್ತ ಪ್ರಯಾಣಿಕರ ತಂಗುದಾಣವೂ ಇಲ್ಲದ ಮೇಲ್ಮೈಯಲ್ಲಿ ಬ್ಯಾಲೆನ್ಸ್ ಮಾಡಿಕೊಂಡು ನಿಲ್ಲುತ್ತಾರೆ. ಪಕ್ಕದಲ್ಲಿರುವ ವಾಣಿಜ್ಯ ಕಟ್ಟಡದ ಎದುರು, ಸಾಲಾಗಿ ನಿಂತಿರುವ ಆಟೊಗಳ ಅಕ್ಕಪಕ್ಕ, ಬಸ್ಸುಗಳೇನಾದರೂ ನಿಲ್ಲುತ್ತವೆಯೋ ಎಂದು ಚಾತಕಪಕ್ಷಿಗಳಂತೆ ಕಾಯುತ್ತಾರೆ. ಈ ಎರಡೂ ಜಾಗಗಳಲ್ಲಿ ಬಸ್ಸುಗಳು ನಿಲ್ಲುತ್ತವೆ. ಪ್ರಯಾಣಿಕರಿಗೆ ನಿಲ್ಲಲು ಸೂರೇ ಇಲ್ಲ. ರಣಬಿಸಿಲು ಇರಲಿ, ಮಳೆ ಬರಲಿ, ಚಳಿ (ಇಲ್ಲಿ ಕಡಿಮೆ) ಇರಲಿ, ಬೆಳಗ್ಗೆ ಮತ್ತು ಸಂಜೆ ಈ ಜಾಗಗಳಲ್ಲಿ ಸಮಸ್ಯೆಗೆ ಹಲವು ವಾರ್ಷಿಕೋತ್ಸವಗಳಾದವು. ಸರ್ವೀಸ್ ರೋಡ್ ನಲ್ಲಿ ಮಂಗಳೂರಿಗೆ ಬಸ್ಸಿಗೆ ನಿಲ್ಲುವವರು ರಾತ್ರಿ ವೇಳೆಯಲ್ಲಂತೂ ಬೀದಿ ದೀಪಗಳೂ ಇಲ್ಲದೆ ಸಂಕಷ್ಟ ಅನುಭವಿಸಬೇಕು. ಪ್ರತಿ ಬಾರಿಯೂ ಈ ಸಮಸ್ಯೆಗಳನ್ನು ಪ್ರಸ್ತಾಪಿಸಿದಾಗ, ಇದಕ್ಕೆಲ್ಲಾ ಜಾಗ ಎಲ್ಲಿದೆ ಸ್ವಾಮಿ ಎಂಬ ಮಾರುತ್ತರ ಬರುತ್ತದೆ. ಆದರೆ ಮೂರು ವರ್ಷಗಳ ಹಿಂದೆ ಕೆಡಹಿ ಧರಾಶಾಯಿಯಾದ ಹಳೆ ತಾಪಂ ಕಟ್ಟಡ ಇದ್ದ ಸುಮಾರು ಅರ್ಧ ಎಕರೆ ಜಾಗದಲ್ಲಿ ಪೊದೆಗಳು ಬೆಳೆದು, ಚೇಳುಗಳ ವಾಸಸ್ಥಾನವಾಗಿ, ಮೂತ್ರ ಮಾಡುವವರ, ಕಸ ಎಸೆಯುವ ತಾಣವಾಗಿ ವ್ಯವಸ್ಥೆಯನ್ನು ಅಣಕಿಸುತ್ತದೆ.

ಬಿ.ಸಿ.ರೋಡಿನಲ್ಲಿ ಪಾರ್ಕಿಂಗ್ ಸಮಸ್ಯೆ ಎಂಬುದು ಅತಿ ಪುರಾತನವಾದ ಸಮಸ್ಯೆ. ಸರ್ಕಾರದ ಹಣ ಅರ್ಥಾತ್ ನಮ್ಮದೇ ತೆರಿಗೆ ಹಣದಲ್ಲಿ ಬೃಹತ್ ಗಾತ್ರದ ಕಟ್ಟಡಗಳನ್ನು ನಿರ್ಮಿಸಿದರೂ ಆ ಕಟ್ಟಡದಲ್ಲೂ ಅಂಡರ್ ಗ್ರೌಂಡ್ ಪಾರ್ಕಿಂಗ್ ಇಲ್ಲ. ವಾಣಿಜ್ಯ ಸಂಕೀರ್ಣದಲ್ಲಿ ಪಾರ್ಕಿಂಗ್ ಜಾಗವಿಲ್ಲ, ಅಂಗಡಿಯ ಎದುರು ವಾಹನ ನಿಲ್ಲಿಸುವಂತೆಯೂ ಇಲ್ಲ. ಇಂಥದ್ದೊಂದು ಬೃಹತ್ ಪಾರ್ಕಿಂಗ್ ಸಮಸ್ಯೆ ಇರುವಾಗಲೇ ಅದೇ ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಯಾವುದಕ್ಕೂ  ಉಪಯೋಗವೇ ಇಲ್ಲದ ಕಟ್ಟಡಗಳು ಅನಾಥವಾಗಿವೆ. ಸರಿಸುಮಾರು ಒಂದು ಎಕರೆಗೂ ಜಾಸ್ತಿ ಜಾಗವೇ ಇಲ್ಲಿದೆ. ಸುಮಾರು ನಾಲ್ಕು ವರ್ಷಗಳಿಂದ ಈ ರೀತಿಯಾಗಿ ಉಪಯೋಗಶೂನ್ಯವಾಗುವ ಜಾಗ ಒಂದೆಡೆ ಇದ್ದರೆ, ಇನ್ನೊಂದೆಡೆ ಸರಿಯಾಗಿ ಬಸ್ಸಿಗೆ ನಿಲ್ಲಲ್ಲು ಆಗದೆ, ಸರಿಯಾದ ಜಾಗದಲ್ಲಿ ಪಾರ್ಕಿಂಗ್ ಮಾಡಲಾಗದೆ ಜನ ಪರದಾಡುತ್ತಿದ್ದಾರೆ. ಸಂಬಂಧಪಟ್ಟವರು, ಇದಕ್ಕೊಂದು ಪರಿಹಾರ ಕಲ್ಪಿಸಬೇಕಾದ ಸಮಯವೂ ಹೌದು. ಇಂತಿಷ್ಟು ದಿನ/ವಾರ/ತಿಂಗಳು ಅಥವಾ ವರ್ಷದೊಳಗೆ …YES, ನೋಡಿ ನಾವಿಷ್ಟು ಬದಲಾವಣೆ ಕಾರ್ಯರೂಪಕ್ಕೆ ತರುತ್ತೇವೆ ಎಂದು ಜನರಿಗೆ ಭರವಸೆ ಜೊತೆ ಅನುಷ್ಠಾನಕ್ಕೆ ದಿನನಿಗದಿ ಮಾಡಿದರೆ, ಜನಸಾಮಾನ್ಯರಿಗೆ ಅನುಕೂಲವಾದೀತು.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts