ಬಂಟ್ವಾಳ: ಪುತ್ತೂರು ಪಡುವನ್ನೂರು ಪಡುಮಲೆಯ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಹೊರಡಿಸಿದ ನಮ್ಮ ಪಡುಮಲೆ ಎಂಬ ಮನವಿಪತ್ರ ಬಿಡುಗಡೆ ಹಾಗೂ ಏಪ್ರಿಲ್ 23, 24ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯಲ್ಲಿ ಶನಿವಾರ ಸಂಜೆ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮನವಿ ಪತ್ರವನ್ನು ಬಿಡುಗಡೆಗೊಳಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಕೋಟಿ ಚೆನ್ನಯರು ಎಲ್ಲ ಜಾತಿ, ಮತ, ಪಂಥಗಳಿಗೆ ಆದರ್ಶಪುರುಷರು, ಜನರನ್ನು ಆರೋಗ್ಯವಂತರನ್ನಾಗಿಸಲು ಗರೋಡಿಗಳನ್ನು ಸ್ಥಾಪಿಸಿದವರು. ಅವರನ್ನು ಆರಾಧಿಸುವ ಕೋಟ್ಯಂತರ ಜನರು ನಮ್ಮಲ್ಲಿದ್ದಾರೆ, ಮುಂದಿನ ಪೀಳಿಗೆಗೆ ಈ ತುಳುನಾಡಿನ ಅವಳಿ ವೀರರ ಇತಿಹಾಸ ಚರಿತ್ರೆಯ ನೈಜ ಚಿತ್ರಣ ದೊರಕಬೇಕು ಎನ್ನುವುದೇ ನಮ್ಮ ಪ್ರತಿಷ್ಠಾನದ ಪ್ರಾಮಾಣಿಕ ಉದ್ದೇಶ. ಪಡುಮಲೆ ಕ್ಷೇತ್ರದ ಜೀರ್ಣೋದ್ಧಾರದ ಬಳಿಕ ತುಳುನಾಡಿನ ಹೆಮ್ಮೆಯ ಪವಿತ್ರ ಕ್ಷೇತ್ರವಾಗಿ ಹೆಸರು ಗಳಿಸಲಿದೆ ಎಂದು ಹೇಳಿದರು. ಆಡಳಿತ ಮೊಕ್ತೇಸರ, ಚಿತ್ರನಟ ವಿನೋದ್ ಆಳ್ವ ಕ್ಷೇತ್ರದ ಕುರಿತು ಮಾತನಾಡಿ ಸರ್ವರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ರಂಜನ್ ಮಿಜಾರು, ಜಿಪಂ ಸದಸ್ಯರಾದ ಕಮಲಾಕ್ಷಿ ಪೂಜಾರಿ, ರವೀಂದ್ರ ಕಂಬಳಿ, ಸಮಿತಿಯ ಪ್ರಮುಖರಾದ ಪ್ರಕಾಶ್ ಅಂಚನ್, ದೇವಪ್ಪ ಪೂಜಾರಿ, ಭುವನೇಶ್ ಪಚ್ಚಿನಡ್ಕ ಉಪಸ್ಥಿತರಿದ್ದರು. ಡೊಂಬಯ ಅರಳ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸುದರ್ಶನ ಬಜ ವಂದಿಸಿದರು.